ಜಿಲ್ಲೆ

ಸರ್ಕಾರಕ್ಕೆ ಕೊಳೆ ರೋಗ ಬಂದಿದೆ!

ಶಿವಮೊಗ್ಗ:ರೈತರ ಹೆಸರಿನಲ್ಲೇ ಅಧಿಕಾರಕ್ಕೆ ಬಂದ ಕೇಂದ್ರ ಹಾಗೂ ರಾಜ್ಯ ಸರ್ಕಾರ ಈಗ ರೈತರನ್ನು ಕಡೆಗಣಿಸಿವೆ. ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೇ ಕೊಳೆ ರೋಗ ಬಂದಿದೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಎಸ್.ಸುಂದರೇಶ್ ಹರಿಹಾಯ್ದಿದ್ದಾರೆ.

ಅಡಕೆ ಬೆಳೆಗಾರರು ತೀವ್ರವಾಗಿ ತೊಂದರೆಗೆ ಸಿಲುಕಿದ್ದಾರೆ. ಕೊಳೆ ರೋಗ ಒಂದೆಡೆಯಾದರೆ ಎಲೆ ಚುಕ್ಕೆ ರೋಗ ಇನ್ನೊಂದೆಡೆ. ಅಡಕೆ ಮಾತ್ರವಲ್ಲ ತೋಟವೇ ನಾಶವಾಗುತ್ತಿದೆ. ಎಲೆ ಚುಕ್ಕೆ ರೋಗಕ್ಕೆ ಬೇಸತ್ತು ಅಡಕೆ ಬೆಳೆಗಾರರು ಆತ್ಮಹತ್ಯೆ ಹಾದಿ ಹಿಡಿದಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಜ್ಞಾನಿಗಳು, ತೋಟಗಾರಿಕೆ ಇಲಾಖೆ ಅಧಿಕಾರಿಗಳು ನೀಡಿದ ಸಲಹೆ, ಸೂಚಿಸಿದ ಕೀಟನಾಶಕಗಳು ಪ್ರಯೋಜನಕ್ಕೆ ಬರುತ್ತಿಲ್ಲ. ಕೇಂದ್ರ ಸರ್ಕಾರ ಭೂತಾನ್‌ನಿಂದ ಹಸಿ ಅಡಕೆ ಆಮದು ಮಾಡಿಕೊಳ್ಳುವ ಮೂಲಕ ಬೆಳೆಗಾರರ ಗಾಯದ ಮೇಲೆ ಬರೆ ಎಳೆದಿದೆ ಎಂದು ದೂರಿದರು.

ಅತಿವೃಷ್ಠಿಯಿಂದ ರೈತರು ಬೆಳೆ ಕಳೆದುಕೊಂಡು ಸಂಕಷ್ಟದಲ್ಲಿದ್ದಾರೆ. ಕಳೆದ ವರ್ಷದ ಬೆಳೆ ನಷ್ಟಕ್ಕೆ ಇನ್ನೂ ಪರಿಹಾರ ನೀಡಿಲ್ಲ. ಶರಾವತಿ ಮುಳಗಡೆ ಸಂತ್ರಸ್ತರ ಸಮಸ್ಯೆ ಮತ್ತಷ್ಟು ಜಟಿಲವಾಗಿದೆ. ಪ್ರತಿಬಾರಿಯೂ ಕಾಂಗ್ರೆಸ್‌ನ್ನು ಟೀಕಿಸುವ ಬಿಜೆಪಿ ಮುಖಂಡರು ಈಗ ಮಾಡುತ್ತಿರುವುದೇನು? ಎಂದು ಪ್ರಶ್ನಿಸಿದರು.

ನಗರ ಪಾಲಿಕೆ ಸದಸ್ಯರಾದ ಎಚ್.ಸಿ.ಯೋಗೇಶ್, ಯಮುನಾ ರಂಗೇಗೌಡ, ಪ್ರಮುಖರಾದ ರಾಮೇಗೌಡ, ಚಂದ್ರಶೇಖರ್, ಕೆ.ಎಲ್.ಜಗದೀಶ್ವರ್, ಎನ್.ಡಿ.ಪ್ರವೀಣ್‌ಕುಮಾರ್, ಲಕ್ಷ್ಮಣಪ್ಪ ಮುಂತಾದವರು ಸುದ್ದಿಗೋಷ್ಠಿಯಲ್ಲಿದ್ದರು.

ಚುನಾವಣೆಯೇ ಮುಖ್ಯ

ಬಿಜೆಪಿ ನಾಯಕರಿಗೆ ರೈತರು, ಬಡವರ ಕಲ್ಯಾಣಕ್ಕಿಂತಲೂ ಚುನಾವಣೆಯೇ ಮುಖ್ಯವಾಗಿದೆ. ಸಚಿವರು ಭ್ರಷ್ಟಾಚಾರದಲ್ಲಿ ನಿರತರಾಗಿದ್ದಾರೆ. ಅಧಿಕಾರದ ಅಮಲು ಹೆಚ್ಚಾಗಿದೆ. ಮೀಸಲಾತಿ ಎಂಬ ತುಪ್ಪವನ್ನು ಜನರ ಮೂಗಿಗೆ ಸವರುತ್ತಿದ್ದಾರೆ. ಜಿಲ್ಲೆಯಲ್ಲಿ ಮರಳು ಮಾಫಿಯಾ, ಗಾಂಜಾದಂತಹ ಅಕ್ರಮ ಚಟುವಟಿಕೆ ನಿರಂತರವಾಗಿ ನಡೆಯುತ್ತಿವೆ. ಗೃಹ ಸಚಿವರಿಗೆ ಈ ಬಗ್ಗೆ ಏನೂ ಗೊತ್ತಿಲ್ಲ. ಉಸ್ತುವಾರಿ ಸಚಿವರನ್ನು ಹುಡುಕಬೇಕಾದ ಸ್ಥಿತಿಯಿದೆ ಎಂದು ಎಚ್.ಎಸ್.ಸುಂದರೇಶ್ ಆರೋಪಿಸಿದರು.