ಜಿಲ್ಲೆ

ಟಿಪ್ಪರ್ ಡಿಕ್ಕಿ: ಕಾರಿನಲ್ಲಿದ್ದವರು ಪಾರು

Shivamogga

ಶಿವಮೊಗ್ಗ: ನಗರದ ಎಂಆರ್‌ಎಸ್‌ನಲ್ಲಿ ಗುರುವಾರ ಮಧ್ಯಾಹ್ನ ವೇಗವಾಗಿ ಬಂದ ಟಿಪ್ಪರ್ ಕಾರಿಗೆ ಡಿಕ್ಕಿ ಹೊಡೆದಿದ್ದು ಮಾರುತಿ ಕಾರಿನಲ್ಲಿದ್ದ ಪ್ರಯಾಣಿಕರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಚಿಕ್ಕಮಗಳೂರಿನ ಮಣಿಕಂಠ, ಅವರ ಪತ್ನಿ ಮತ್ತು ಒಂದು ವರ್ಷದ ಮಗು ಅಪಘಾತದಿಂದ ಪಾರಾದವರು. ಮಣಿಕಂಠ ಅವರು ಮಾರುತಿ ಕಾರಿನಲ್ಲಿ ಕುಟುಂಬದ ಜತೆ ಚಿಕ್ಕಮಗಳೂರಿನಿಂದ ಶಿಕಾರಿಪುರದ ಅತ್ತೆ ಮನೆಗೆ ತೆರಳುತ್ತಿದ್ದರು. ಈ ವೇಳೆ ಎನ್.ಆರ್.ಪುರ ರಸ್ತೆಯಿಂದ ಶಿವಮೊಗ್ಗಕ್ಕೆ ಬರುತ್ತಿದ್ದ ಅವರ ಕಾರಿಗೆ ಶಿವಮೊಗ್ಗದಿಂದ ಭದ್ರಾವತಿ ಕಡೆಗೆ ತೆರಳುತ್ತಿದ್ದ ಟಿಪ್ಪರ್ ಎಂಆರ್‌ಎಸ್ ವೃತ್ತದಲ್ಲೇ ಡಿಕ್ಕಿ ಹೊಡೆದಿತ್ತು. ಪೂರ್ವ ಸಂಚಾರ ಠಾಣೆಯಲ್ಲಿ ಟಿಪ್ಪರ್ ಚಾಲಕನ ವಿರುದ್ಧ ಪ್ರಕರಣ ದಾಖಲಾಗಿದೆ.

ಸಂತೈಸಿದ ಕಾರ್ಯಕರ್ತರು: ಸಚಿವ ಕೆ.ಎಸ್.ಈಶ್ವರಪ್ಪ ಅವರನ್ನು ಅಭಿನಂದಿಸಲು ಬಿಜೆಪಿ ಆಯೋಜಿಸಿದ್ದ ಕಾರ್ಯಕ್ರಮದ ಅಣತಿ ದೂರದಲ್ಲೇ ಅಪಘಾತ ಸಂಭವಿಸಿತ್ತು. ಅಪಘಾತದಿಂದ ಕಾರಿನಲ್ಲಿದ್ದ ಮಣಿಕಂಠ ಅವರ ಕುಟುಂಬ ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದರೂ ಆಘಾತಕ್ಕೆ ಒಳಗಾಗಿತ್ತು. ಸಚಿವರನ್ನು ಸ್ವಾಗತಿಸಲು ಸಜ್ಜಾಗಿದ್ದ ಬಿಜೆಪಿ ಕಾರ್ಯಕರ್ತರು ತಕ್ಷಣವೇ ಕಾರಿನಲ್ಲಿದ್ದವರನ್ನು ಕೂರಿಸಿ ನೀರು ಕುಡಿಸಿ ಸಂತೈಸಿದರು.