ಜಿಲ್ಲೆ

14 ದಿನ ನ್ಯಾಯಾಂಗ ಬಂಧನಕ್ಕೆ ಶಂಕಿತ ಉಗ್ರರು

ಶಿವಮೊಗ್ಗ: ಶಿವಮೊಗ್ಗ ಮತ್ತು ತೀರ್ಥಹಳ್ಳಿ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಸ್ಫೋಟಕ್ಕೆ ಸಂಚು ರೂಪಿಸಿದ್ದ ಆರೋಪದ ಮೇಲೆ ಬಂಧಿತರಾಗಿರುವ ಶಂಕಿತ ಉಗ್ರರಿಬ್ಬರಿಗೆ ನಗರದ 3ನೇ ಜೆಎಂಎಫ್‌ಸಿ ನ್ಯಾಯಾಲಯವು ಶುಕ್ರವಾರ 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ಮಂಗಳೂರಿನ ಮಾಜ್ ಮುನೀರ್ ಅಹಮ್ಮದ್ ಮತ್ತು ಶಿವಮೊಗ್ಗ ಸಿದ್ದೇಶ್ವರ ನಗರದ ಸೈಯದ್ ಯಾಸೀನ್ ಅಲಿಯಾಸ್ ಬೈಲು ಪೊಲೀಸ್ ಕಸ್ಟಡಿಯಿಂದ ನ್ಯಾಯಾಂಗ ಬಂಧನಕ್ಕೆ ಒಳಪಟ್ಟವರು. ಇಬ್ಬರಿಗೂ ಶುಕ್ರವಾರ(ಸೆ.30)ರವರೆಗೆ ಪೊಲೀಸರ ವಶಕ್ಕೆ ಒಪ್ಪಿಸಲಾಗಿತ್ತು. ಕಸ್ಟಡಿ ಅವಧಿ ಮುಗಿದ ಹಿನ್ನಲೆಯಲ್ಲಿ ನ್ಯಾಯಾಧೀಶರು 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶಿಸಿದರು.

ಸೆ.20ರಂದು ಆರೋಪಿಗಳನ್ನು ಪೊಲೀಸರು ಬಂಧಿಸಿ ಯುಎಪಿಎ(ಅನ್‌ಲಾಫುಲ್ ಅಕ್ಟಿವಿಟೀಸ್ ಪ್ರಿವೆಂಶನ್ ಆಕ್ಟ್)ದಡಿ ಕೇಸ್ ದಾಖಲಿಸಿಕೊಂಡಿದ್ದರು. ಮೊದಲು ಸೆ.27ರವರೆಗೆ ವಶಕ್ಕೆ ಪಡೆದಿದ್ದ ಪೊಲೀಸರು ಮತ್ತೆ ಶುಕ್ರವಾರದವರೆಗೆ ವಶಕ್ಕೆ ಪಡೆದು ವಿಚಾರಣೆ ನಡೆಸಿದರು. ಶುಕ್ರವಾರ ಪೊಲೀಸರ ವಿಚಾರಣೆ ಅವಧಿ ಮುಗಿದ ಕಾರಣ ಮೆಗ್ಗಾನ್ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆಗೆ ಒಳಪಡಿಸಿ ಮಧ್ಯಾಹ್ನ ನ್ಯಾಯಾಧೀಶರ ಎದುರು ಹಾಜರುಪಡಿಸಿದರು.