ಶಿವಮೊಗ್ಗ: ವಿದ್ಯಾರ್ಥಿಗಳಿಗೆ ಆಸಕ್ತಿ ಇರುವ ಹಾಗೂ ತಮಗೆ ಬೇಕಿರುವ ವಿಷಯ ಕಲಿಯುವುದೇ ಎನ್‌ಇಪಿ (ರಾಷ್ಟ್ರೀಯ ಶಿಕ್ಷಣ ನೀತಿ) ಉದ್ದೇಶ ಎಂದು ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ಹೇಳಿದರು.
ನಗರದ ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜಿನಲ್ಲಿ ಸೋಮವಾರ ಎನ್‌ಎಸ್‌ಎಸ್ ಘಟಕ, ಯುವ ರೆಡ್ ಕ್ರಾಸ್ ಘಟಕ ಹಾಗೂ ಐಕ್ಯೂಎಸಿ ವಿಭಾಗದ ಆಶ್ರಯದಲ್ಲಿ ಇ-ಗವರ್ನೆನ್ಸ್, ಆರ್‌ಟಿಐ, ಸೆಂಟ್ರಲ್ ವಿಜಿಲೆನ್ಸ್ ಕಮಿಷನ್ ಬಗ್ಗೆ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಇವತ್ತಿನ ಸಂದರ್ಭದಲ್ಲಿ ಶಿಕ್ಷಣ ನೀತಿ ಬದಲಾವಣೆ ಅವಶ್ಯಕತೆಯನ್ನು ಮನಗಂಡು ಪ್ರಧಾನಿ ನರೇಂದ್ರ ಮೋದಿ ಅವರು ನೂತನ ಶಿಕ್ಷಣ ನೀತಿ ರೂಪಿಸಿದ್ದಾರೆ ಎಂದರು.
ವಿದ್ಯಾರ್ಥಿಗಳಲ್ಲಿ ಎನ್‌ಇಪಿ ಬಗ್ಗೆ ಜಾಗೃತಿ ಅವಶ್ಯಕತೆ ಇದೆ. ಶಿಕ್ಷಣದ ಜತೆಗೆ ಸಾಮಾನ್ಯ ಜ್ಞಾನದ ಅರಿವು ಕೂಡ ಬೇಕಿದೆ. ಕಾಲೇಜು ದಿನಗಳು ಅಮೂಲ್ಯವಾಗಿದ್ದು ಜೀವನ ಯಾವ ರೀತಿ ಇರಬೇಕೆಂದು ರೂಪುರೇಷೆ ಹಾಕಿಕೊಳ್ಳಬೇಕು. ಹಿಂದೆ ಬೆರಳೆಣಿಕೆಯಷ್ಟು ಹೆಣ್ಣುಮಕ್ಕಳು ಉನ್ನತ ಶಿಕ್ಷಣ ಪಡೆಯುತ್ತಿದ್ದರು. ಆದರೆ, ಈಗ ಪರಿಸ್ಥಿತಿ ಬದಲಾಗಿದೆ. ಗಂಡು ಮಕ್ಕಳಿಗೆ ಸರಿಸಮಾನವಾಗಿ ಹೆಣ್ಣುಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ. ಹೆಚ್ಚಿನ ಅಂಕಗಳನ್ನು ಗಳಿಸುತ್ತಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.
ನಮ್ಮ ದೇಶದ ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗ ಹಾಗೂ ಸಂವಿಧಾನದ ಬಗ್ಗೆ ವಿದ್ಯಾರ್ಥಿಗಳು ತಿಳಿಯುವ ಅವಶ್ಯಕತೆ ಇದೆ. ಎಲ್ಲ ರಂಗಕ್ಕೂ ನ್ಯಾಯ ಒದಗಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೆಚ್ಚಿನ ಒತ್ತು ನೀಡುತ್ತಿದ್ದಾರೆ ಎಂದು ಹೇಳಿದರು.
ವೆಂಕಟೇಶ್ ರಾವ್ ಸಂಪನ್ಮೂಲ ವ್ಯಕ್ತಿಗಳಾಗಿದ್ದರು. ಪ್ರಮುಖರಾದ ಟಿ.ಆರ್.ಅಶ್ವತ್ಥನಾರಾಯಣ ಶೆಟ್ಟಿ, ರೊ.ವಿಜಯಕುಮಾರ್, ಡಾ. ನಾಗರಾಜ್ ಪರಿಸರ, ಪ್ರಾಚಾರ್ಯ ಎಚ್.ಎಂ.ಸುರೇಶ್, ಪ್ರೊ. ಎಸ್.ಜಗದೀಶ್, ಪ್ರೊ. ನಾಗರಾಜ್, ಪ್ರೊ. ಖಾಜೀಂ ಶರೀಫ್, ಪ್ರೊ. ಎನ್.ಮಂಜುನಾಥ ಇದ್ದರು.