ಜಿಲ್ಲೆ

ಶಿವಮೊಗ್ಗ ಜಿಲ್ಲೆಯಲ್ಲಿ ಚುನಾವಣಾ ಕಾವು, ಹಣದ ಜತೆ ಮದ್ಯದ ಹೊಳೆ

ಶಿವಮೊಗ್ಗ: ಜಿಲ್ಲೆಯಲ್ಲಿ ಚುನಾವಣಾ ಕಾವು ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಕಾರು ತಪಾಸಣೆ ವೇಳೆ ಸೂಕ್ತ ದಾಖಲೆ ಇಲ್ಲದೆ ಸಾಗಿಸುತ್ತಿದ್ದ ಲೀಟರ್ ಗಟ್ಟಲೆ ಮದ್ಯ ಮತ್ತು ಬೀಯರ್ ಪತ್ತೆಯಾಗಿದೆ.

ಶಿಕಾರಿಪುರದ ದೇವಬಾಳ ಯಡವಾಲ ರಸ್ತೆಯ ಕೆರೆ ಏರಿ ಪಕ್ಕದ ರಸ್ತೆಯಲ್ಲಿ ವ್ಯಾಗನಾರ್ ಕಾರು ತಪಾಸಣೆ ನಡೆಸಿದಾಗ ಮದ್ಯ ಸಾಗಣೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಕಾರಿನಲ್ಲಿದ್ದ ವಿವಿಧ ಬ್ರಾಂಡ್‌ನ 3,21,939 ರೂ. ಮೌಲ್ಯದ 70.790 ಲೀ. ಮದ್ಯ, 56.270 ಲೀ. ಬಿಯರ್ ವಶಕ್ಕೆ ಪಡೆದಿದ್ದಾರೆ.

ಶಿವಮೊಗ್ಗ ಅಬಕಾರಿ ಉಪ ಆಯುಕ್ತ ಕ್ಯಾಪ್ಟನ್ ಅಜಿತ್‌ಕುಮಾರ್ ಮಾರ್ಗದರ್ಶನದಲ್ಲಿ ಅಬಕಾರಿ ಅಧಿಕಾರಿಗಳು ಕಾರ್ಯಾಚರಣೆ ಕೈಗೊಂಡಿದ್ದರು. ಚಾಲಕ ಗಿರೀಶ್‌ನಾಯ್ಕ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಈವರೆಗೂ ಎಷ್ಟು ಮದ್ಯ ಸೀಜ್ ಆಗಿದೆ?: ವಿಧಾನಸಭೆ ಚುನಾವಣೆ ಹಿನ್ನೆಲೆ ಜಿಲ್ಲೆಯಾದ್ಯಂತ ಅಬಕಾರಿ ಇಲಾಖೆ ಅಧಿಕಾರಿಗಳು, ಪೊಲೀಸರು ಕಾರ್ಯಾಚರಣೆ ನಡೆಸಿ ಅಕ್ರಮ ಮದ್ಯವನ್ನು ವಶಪಡಿಸಿಕೊಳ್ಳುತ್ತಿದ್ದಾರೆ. ಈವರೆಗೂ ಜಿಲ್ಲೆಯಲ್ಲಿ 3,75,919 ರೂ. ಮೌಲ್ಯದ 1,132.072 ಲೀ. ಮದ್ಯ ವಶಪಡಿಸಿಕೊಳ್ಳಲಾಗಿದೆ. ಅದರಲ್ಲೂ ಸಾಗರ ತಾಲೂಕಿನಲ್ಲಿ ಅತಿ ಹೆಚ್ಚು ಮದ್ಯ ವಶಪಡಿಸಿಕೊಳ್ಳಲಾಗಿದೆ. ಚುನಾವಣೆ ಹಿನ್ನೆಲೆ ತಪಾಸಣೆ ಆರಂಭಸಿದಾಗಿನಿಂದ ಸಾಗರ ತಾಲೂಕಿನಲ್ಲಿ 43,408 ರೂ. ಮೌಲ್ಯದ 405 ಲೀ. ಅಕ್ರಮ ಮದ್ಯ ವಶಪಡಿಸಿಕೊಳ್ಳಲಾಗಿದೆ. ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ 168.3 ಲೀ., ತೀರ್ಥಹಳ್ಳಿಯಲ್ಲಿ 159 ಲೀ., ಶಿವಮೊಗ್ಗದಲ್ಲಿ 144 ಲೀ., ಸೊರಬದಲ್ಲಿ 87 ಲೀ., ಭದ್ರಾವತಿ 83 ಲೀ. ಮತ್ತು ಶಿಕಾರಿಪುರ 82 ಲೀ. ಮದ್ಯ ವಶಕ್ಕೆ ಪಡೆಯಲಾಗಿದೆ.