ಜಿಲ್ಲೆ

ಮುಸ್ಲಿಮರನ್ನೂ ಜತೆಗೆ ಕೊಂಡೊಯ್ಯಲು ಹೈಕಮಾಂಡ್ ಮಾರ್ಗದರ್ಶನ: ಬಿಎಸ್‌ವೈ

Shivamogga

ಶಿವಮೊಗ್ಗ: ಬಿಜೆಪಿಯ ಎಲ್ಲ ಶಾಸಕರು ಮತ್ತು ಕಾರ್ಯಕರ್ತರು ಹೆಚ್ಚು ಕೆಲಸ ಮಾಡುವ ಜತೆಗೆ ಎಲ್ಲರಲ್ಲೂ ವಿಶ್ವಾಸ ಮೂಡಿಸಬೇಕು. ಅಲ್ಪಸಂಖ್ಯಾತ ಮುಸ್ಲಿಂ ಬಂಧುಗಳನ್ನೂ ಪಕ್ಷದ ಜತೆಗೆ ಕೊಂಡೊಯ್ಯಲು ಹೈಕಮಾಂಡ್ ಮಾರ್ಗದರ್ಶನ ಮಾಡಿದೆ ಎಂದು ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೆಹಲಿಯಲ್ಲಿ ಎರಡು ದಿನಗಳ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಉತ್ತಮವಾಗಿ ನಡೆದಿದ್ದು, ದೇಶದ ಹಾಗೂ ವಿವಿಧ ರಾಜ್ಯಗಳ ರಾಜಕೀಯ ಪರಿಸ್ಥಿತಿ ಬಗ್ಗೆ ಅವಲೋಕಿಸಲಾಯಿತು. ವಿಶೇಷವಾಗಿ ಕರ್ನಾಟಕದಲ್ಲಿ ಚುನಾವಣೆ ಗೆಲ್ಲಲು ಬೇಕಾದ ತಂತ್ರಗಾರಿಕೆಗಳ ಬಗ್ಗೆಯೂ ಚರ್ಚಿಸಲಾಯಿತು ಎಂದರು.

ಪ್ರಧಾನಿ ನರೇಂದ್ರ ಮೋದಿ ಒಂದೂವರೆ ಗಂಟೆ ಮಾರ್ಗದರ್ಶನ ಮಾಡಿದ್ದಾರೆ. ಬಹಳ ಉತ್ಸಾಹದಿಂದ ಕಾರ್ಯಕಾರಿಣಿ ಮುಗಿಸಿ ರಾಜ್ಯಕ್ಕೆ ವಾಪಸಾಗಿದ್ದೇವೆ. ಪಕ್ಷವನ್ನು ಬಲಪಡಿಸಿ ರಾಜ್ಯದಲ್ಲಿ ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತರಲೇಬೇಕೆಂಬ ಹಂಬಲ ಹೊಂದಿದ್ದೇವೆ. ಆ ನಿಟ್ಟಿನಲ್ಲಿ ಕೆಲಸಗಳಾಗುತ್ತಿವೆ. ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಹೆಚ್ಚು ಸಮಯವನ್ನು ರಾಜ್ಯಕ್ಕೆ ಕೊಡಲಿದ್ದಾರೆ. ಅದನ್ನು ಬಳಕೆ ಮಾಡಿಕೊಂಡು 140ಕ್ಕೂ ಹೆಚ್ಚು ಸ್ಥಾನ ಗೆಲ್ಲಲು ಕಾರ್ಯಪ್ರವೃತ್ತರಾಗುತ್ತೇವೆ ಎಂದು ಹೇಳಿದರು. ರಾಜ್ಯದ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಚರ್ಚೆಯಾಗಿಲ್ಲ ಎಂದು ಇದೇ ವೇಳೆ ಸ್ಪಷ್ಟಪಡಿಸಿದರು.