ಚಿಕ್ಕಮಗಳೂರು: ಜಿಲ್ಲೆಯಲ್ಲಿ ಕರೊನಾ ಪರೀಕ್ಷಾ ಲ್ಯಾಬ್ ಆರಂಭಗೊಳ್ಳದೆ ಸಮಸ್ಯೆ ತಾರಕಕ್ಕೆ ಏರುವಂತಾಗಿದೆ. ದಿನೇ ದಿನೆ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು, 1500ಕ್ಕೂ ಹೆಚ್ಚು ಮಂದಿಯ ವರದಿ ಹೊರಗಿನ ಪ್ರಯೋಗಾಲಯಗಳಿಂದ ಬರಬೇಕಿದೆ.
ಕರೊನಾ ಭೀತಿ ಎದುರಾದಾಗಿನಿಂದಲೂ ಜ್ವರ, ಶೀತ, ಕೆಮ್ಮು ಬಾಧಿತರನ್ನು ಪರೀಕ್ಷೆಗೆ ಒಳಪಡಿಸಲಾಗುತ್ತಿದ್ದು, ಪರೀಕ್ಷಾ ವರದಿಗಾಗಿ ಹೊರ ಜಿಲ್ಲೆಗಳ ಪ್ರಯೋಗಾಲಯಗಳನ್ನು ಅವಲಂಬಿಸಲಾಗಿದೆ. ಜಿಲ್ಲೆಯಲ್ಲಿ ಜೂನ್ ಪ್ರಾರಂಭದಿಂದಲೇ ಲ್ಯಾಬ್ ತೆರೆಯಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಅಧಿಕಾರಿಗಳು ಭರವಸೆ ನೀಡುತ್ತಲೇ ಬಂದಿದ್ದಾರೆ. ಆದರೆ ತಾಂತ್ರಿಕ ಅಡಚಣೆ ಹಿನ್ನೆಲೆಯಲ್ಲಿ ಇದುವರೆಗೂ ಲ್ಯಾಬ್ ಆರಂಭವಾಗಲು ಕಾಲ ಕೂಡಿ ಬಂದಿಲ್ಲ.
ಜಿಲ್ಲೆಯಲ್ಲಿ ಪ್ರತಿನಿತ್ಯ ಕರೊನಾ ಶಂಕಿತರ ಪರೀಕ್ಷೆ ನಡೆಸಲಾಗುತ್ತಿದ್ದು ಇತ್ತೀಚಿನ ದಿನಗಳಲ್ಲಿ ದಿನಕ್ಕೆ ನೂರಕ್ಕೂ ಹೆಚ್ಚು ಮಂದಿಯ ಗಂಟಲು ದ್ರವ ಸಂಗ್ರಹಿಸಿ ಶಿವಮೊಗ್ಗ ಮತ್ತು ಹಾಸನದ ಪ್ರಯೋಗಾಲಯಕ್ಕೆ ಕಳುಹಿಸಲಾಗುತ್ತಿದೆ. ಆದರೆ ಆ ಎರಡೂ ಜಿಲ್ಲೆಗಳಲ್ಲಿ ಹೆಚ್ಚಿನ ಕರೊನಾ ಪ್ರಕರಣಗಳು ಪತ್ತೆಯಾಗುತ್ತಿರುವುದರಿಂದ ಜಿಲ್ಲೆಯಿಂದ ಕಳುಹಿಸಿದ ಮಾದರಿಯ ವರದಿ ಬರುವುದು ವಿಳಂಬವಾಗುತ್ತಿದೆ.
ಸೋಂಕಿನ ಲಕ್ಷಣಗಳು, ಐಎಲ್ಐ ಪ್ರಕರಣಗಳಲ್ಲಿ ಮಾತ್ರ ದುಂಬಾಲು ಬಿದ್ದು ಹೊರ ಜಿಲ್ಲೆಗಳ ಲ್ಯಾಬ್ನಿಂದ ವರದಿ ಪಡೆಯಲಾಗುತ್ತಿದೆಯೆ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ಸೋಂಕಿನ ಲಕ್ಷಣ ಇಲ್ಲದವರ ವರದಿ ಬರುವುದು ಒಂದು ವಾರ ತಡವಾಗುತ್ತಿದೆ. ವಾರದ ನಂತರ ಪಾಸಿಟಿವ್ ಬಂದಿರುವ ಉದಾಹರಣೆಗಳೂ ಇವೆ.