ಶಿವಮೊಗ್ಗ: ಮಲೆನಾಡಲ್ಲಿ ಕರೊನಾ 2ನೇ ಅಲೆ ಅಬ್ಬರಕ್ಕೆ ಜನತೆ ಕಂಗಾಲಾಗಿದ್ದಾರೆ. ದಿನೇದಿನೆ ಸೋಂಕು ಏರಿಕೆಯಾಗುತ್ತಿದ್ದು, ಅಗತ್ಯ ಲಸಿಕೆ, ಔಷಧ, ಧ್ಯಾನ, ಯೋಗ ಸೇರಿ ಮುಂಜಾಗ್ರತೆಗೆ ಮೊರೆ ಹೋಗುತ್ತಿದ್ದಾರೆ. ಆದರೂ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ ಜಿಲ್ಲೆಯ ಜನರನ್ನು ಆತಂಕಕ್ಕೆ ತಳ್ಳಿದ್ದು ಒಂದೂವರೆ ತಿಂಗಳಲ್ಲೇ ಬರೋಬ್ಬರಿ 350ರ ಆಸುಪಾಸು ಜನರು ಮಹಾಮಾರಿಗೆ ಬಲಿಯಾಗಿದ್ದಾರೆ.
ಮಾರ್ಚ್‌ನಲ್ಲಿ ಕಾಣಿಸಿಕೊಂಡ ಎರಡನೇ ಅಲೆ ಹಂತ ಹಂತವಾಗಿ ಏರಿಕೆ ಕಂಡಿತು. ಅದೇ ಮಾದರಿಯಲ್ಲಿ ಸಾವಿನಲ್ಲೂ ದಾಖಲೆ ಬರೆದಿದ್ದು ಮೊದಲ ಅಲೆಯನ್ನೂ ಮೀರಿಸಿ ಜನರನ್ನು ಸಾವಿನ ದವಡೆಗೆ ದೂಡುತ್ತಿದೆ. ಅದರಲ್ಲೂ ಕಳೆದ 23 ದಿನದಲ್ಲಿ 300 ಮಂದಿ ಸೋಂಕಿನಿಂದ ಮೃತಪಟ್ಟಿರುವುದು ಜನರ ಆತಂಕವನ್ನು ಇಮ್ಮಡಿಯಾಗುವಂತೆ ಮಾಡಿದೆ.
ಏ.5ರಂದು 2ನೇ ಅಲೆಯಲ್ಲಿ ಕಡೂರಿನ ವ್ಯಕ್ತಿಯೊಬ್ಬರು ಮೆಗ್ಗಾನ್ ಆಸ್ಪತ್ರೆಯಲ್ಲಿ ಮೃತಪಟ್ಟರು. ಅಂದಿನಿಂದ ಆರಂಭಗೊಂಡ ಸಾವಿನ ಯಾತ್ರೆ ಇನ್ನೂ ಅಂತ್ಯಗೊಂಡಿಲ್ಲ. ಬದಲಿಗೆ ವಯಸ್ಸಿನ ಭೇದಭಾವವಿಲ್ಲದೆ ಯುವಕ-ಯುವತಿಯರು, ಮಹಿಳೆಯರು, ವಯಸ್ಕರನ್ನೂ ಕರೆದೊಯ್ಯುತ್ತಿದೆ. ಮೇ 23ರ ಅಂತ್ಯಕ್ಕೆ ಮೃತರ ಸಂಖ್ಯೆ 686ಕ್ಕೆ ತಲುಪುವಂತೆ ಮಾಡಿದೆ.