ಜಿಲ್ಲೆ

ಶಿಕ್ಷಣದಿಂದ ದೇಶದ ಪ್ರಗತಿ ಸಾಧ್ಯ, ಡಿಸಿಎಂ ಅಶ್ವತ್ಥನಾರಾಯಣ ಅಭಿಮತ, ದೇವನಹಳ್ಳಿ ಸರ್ಕಾರಿ ಕಾಲೇಜಿಗೆ ಭೇಟಿ

Bengaluru Rural

ದೇವನಹಳ್ಳಿ: ದೇಶದ ಪ್ರಗತಿ ಶಿಕ್ಷಣದ ಮೇಲೆ ಅವಲಂಬಿತವಾಗಿರುತ್ತದೆ. ಹಾಗಾಗಿ ನಮ್ಮ ಸರ್ಕಾರ ಶಿಕ್ಷಣ ಕ್ಷೇತ್ರದ ಪ್ರಗತಿಗೆ ಒತ್ತು ನೀಡಿದೆ ಎಂದು ಉಪಮುಖ್ಯಮಂತ್ರಿ ಅಶ್ವತ್ಥನಾರಾಯಣ ಹೇಳಿದರು.

ಪಟ್ಟಣದ ಸರ್ಕಾರಿ ಪದವಿ ಕಾಲೇಜಿಗೆ ಭೇಟಿ ನೀಡಿದ್ದ ವೇಳೆ ಮಾತನಾಡಿದರು. ಕಳೆದ ಸಾಲಿನಲ್ಲಿ ರಾಜ್ಯದ ಸರ್ಕಾರಿ ಪದವಿ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ವಿತರಿಸಲಾದ ಉಚಿತ ಲ್ಯಾಪ್‌ಟಾಪ್‌ಗಳಿಗೆ 300 ಕೋಟಿ ರೂ. ಖರ್ಚಾಗಿದೆ ಎಂದರು. ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗೆ ಸಂಬಂಧಿಸಿದಂತೆ ಶಿಡ್ಲಘಟ್ಟದಲ್ಲಿ ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ತಲೆಎತ್ತುತ್ತಿದೆ. ವಿಶಾಲವಾದ ಜಾಗದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಾಣವಾಗಲಿದೆ ಎಂದರು.

ಡಿಸಿಎಂ ಭರವಸೆ: ಕಾಲೇಜಿನಲ್ಲಿ ಬಹುಪಯೋಗಿ ಆಡಿಟೋರಿಯಂ ಅವಶ್ಯಕತೆ ಇದೆ. ಸೇವಾ ಹಿರಿತನದಲ್ಲಿರುವ ಅತಿಥಿ ಉಪನ್ಯಾಸಕರನ್ನು ಕಾಯಂಗೊಳಿಸಿಕೊಡಿ ಎಂದು ಉಪನ್ಯಾಸಕರ ಪರವಾಗಿ ಪ್ರಾಂಶುಪಾಲ ಡಾ.ಶಿವಶಂಕರಪ್ಪ ಮನವಿ ಮಾಡಿದರು. ನಮಗೆ ಲ್ಯಾಪ್‌ಟಾಪ್ ನೀಡಿಲ್ಲ, ಇಲ್ಲಿ ಬಿಎಂಟಿಸಿ ಬಸ್ ಸೌಲಭ್ಯವಿಲ್ಲ ಎಂದು ಪದವಿ ವಿದ್ಯಾರ್ಥಿಗಳು ಅಳಲು ತೋಡಿಕೊಂಡರು. ಬೇಡಿಕೆಗಳಿಗೆ ಸ್ಪಂದಿಸಿದ ಡಿಸಿಎಂ, ಈ ಬಗ್ಗೆ ಪರಿಶೀಲನೆ ನಡೆಸಿ ಕೂಡಲೆ ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ತಾಲೂಕಿನ ಮುಖಂಡರು ಉಪಮುಖ್ಯಮಂತ್ರಿಗಳಿಗೆ ದೇವನಹಳ್ಳಿ ಚಕ್ಕೋತ ನೀಡಿ ಗೌರವಿಸಿದರು.

ಉಪನ್ಯಾಸಕರಾದ ಕೆ.ಕೆ.ರವಿಚಂದ್ರ, ಕೆಂಪೇಗೌಡ, ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಬಿ.ರಾಜಣ್ಣ, ಉಪಾಧ್ಯಕ್ಷ ಎಚ್.ಎಂ.ರವಿಕುಮಾರ್, ರಾಜ್ಯ ಪರಿಷತ್ ಸದಸ್ಯ ದೇ.ಸೂ.ನಾಗರಾಜ್,ಪುರಸಭಾ ಮಾಜಿ ಸದಸ್ಯ ಕೆ.ಎನ್.ಉಮೇಶ್ ಮತ್ತಿತರರಿದ್ದರು.