ಜಿಲ್ಲೆ

ಧಾರ್ಮಿಕ ಸಿದ್ಧಾಂತದ ನೆಲೆಬೀಡು ಶಿಗ್ಲಿ

ವೀರೇಶ ಸೌದ್ರಿ

ಶಿಗ್ಲಿ: ಕೊಟ್ಟೂರೇಶ್ವರರು ನೆಲೆಸಿದ ನಾಡಲ್ಲಿರುವ ಜನರು ಪುಣ್ಯವಂತರು. ಶಿಗ್ಲಿ ಗ್ರಾಮವು ಧಾರ್ಮಿಕ ಸಿದ್ಧಾಂತದ ನೆಲೆಬೀಡಾಗಿದೆ ಎಂದು ಜಗದ್ಗುರು ಫಕೀರ ದಿಂಗಾಲೇಶ್ವರ ಮಹಾಸ್ವಾಮೀಜಿ ಬಣ್ಣಿಸಿದರು.

ಕೊಟ್ಟೂರು ಬಸವೇಶ್ವರ ದೇವಸ್ಥಾನದ ಲೋಕಾರ್ಪಣೆ ನಿಮಿತ್ತ ಗುರುವಾರ ಏರ್ಪಡಿಸಿದ್ದ ಧರ್ಮಸಭೆ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು. ಕಾಲಕಾಲಕ್ಕೆ ಧರ್ಮ ಕಾರ್ಯಗಳು ನಡೆಯಲಿ. ಮಠದ ಹಾಗೂ ದೇವಸ್ಥಾನದ ಪರಂಪರೆ ಉಳಿಯಲಿ. ಅನೇಕ ಹಿರಿಯರು ಉನ್ನತ ಹುದ್ದೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವುದರ ಫಲವಾಗಿ ಶಿಗ್ಲಿಯು ಗ್ರಾಮ ಮಟ್ಟದಿಂದ ರಾಷ್ಟ್ರಮಟ್ಟದಲ್ಲಿಯೂ ಗುರುತಿಸಿಕೊಂಡಿದೆ. ಹಿರಿಯರು ಕಿರಿಯರಿಗೆ ಮಾರ್ಗದರ್ಶನ ಮಾಡಿ ಧಾರ್ಮಿಕ ಪರಂಪರೆ ಉಳಿಸಬೇಕು ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಮಾಜಿ ಶಾಸಕ ಜಿ.ಎಸ್. ಗಡ್ಡದೇವರಮಠ ಮಾತನಾಡಿ, ಶಿಗ್ಲಿಯಲ್ಲಿ ಸರ್ವಕಾಲಕ್ಕೂ ಧಾರ್ಮಿಕ ಕಾರ್ಯಗಳು ಸಾಂಗೋಪಸಾಂಗವಾಗಿ ಸಾಗುತ್ತಿವೆ. ಸರ್ಕಾರದ ಯಾವುದೆ ಅನುದಾನ ಪಡೆಯದೆ ಕೇವಲ ಭಕ್ತರು ನೀಡಿದ ದೇಣಿಗೆಯಿಂದ ಕೊಟ್ಟೂರು ಬಸವೇಶ್ವರ ದೇವಸ್ಥಾನ ನಿರ್ಮಿಸಿರುವ ಕಾರ್ಯ ಶ್ಲಾಘನೀಯ. ಇದು ಶಿಗ್ಲಿ ಗ್ರಾಮಸ್ಥರ ಭಕ್ತಿ ಮತ್ತು ದಾನದ ಪ್ರತೀಕವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ದೇವಸ್ಥಾನದಿಂದ ಸಂಸ್ಕೃತಿ, ಸಂಸ್ಕಾರ ಮತ್ತು ಸನ್ಮಾರ್ಗ ಲಭಿಸುತ್ತವೆ. ಗುರು ವಿರಕ್ತರ ಕೃಪಾಶೀರ್ವಾದದಿಂದ ಜನಜಾಗೃತಿ ಹಾಗೂ ಪುರಾಣದಂತಹ ಕಾರ್ಯಕ್ರಮಗಳು ಯಶಸ್ಸುನ್ನು ಕಂಡಿದ್ದು ಸಂತೋಷವಾಗಿದೆ ಎಂದರು.

ಶಾಸಕ ಚಂದ್ರು ಲಮಾಣಿ ಮಾತನಾಡಿ, ಗ್ರಾಮಸ್ಥರ ಧಾರ್ಮಿಕ ಹುಮ್ಮಸ್ಸು ದೇವಸ್ಥಾನ ನಿರ್ಮಾಣಕ್ಕೆ ಸಾಕ್ಷಿಯಾಗಿದೆ. ಕೊಟ್ಟೂರೇಶ್ವರಸ್ವಾಮಿ ದೇವಸ್ಥಾನ ಲೋಕಾರ್ಪಣೆಯಿಂದ ಈ ಕ್ಷೇತ್ರ ಪಾವನವಾಯಿತು ಎಂದರು.

ಮಾಜಿ ಶಾಸಕರಾದ ರಾಮಣ್ಣ ಲಮಾಣಿ, ರಾಮಕೃಷ್ಣ ದೊಡ್ಡಮನಿ ಮಾತನಾಡಿ, ಇಂತಹ ಧಾರ್ಮಿಕ ಕಾರ್ಯಗಳಿಂದ ಮನಕುಲವು ಉದ್ದಾರವಾಗುತ್ತದೆ. ದೇವಸ್ಥಾನಗಳು ಮನಪರಿವರ್ತನೆಯ ಕೇಂದ್ರಗಳಾಗಿವೆ ಎಂದರು.

ದಾನಿಗಳು, ಸೇವಾಕರ್ತರನ್ನು ಸನ್ಮಾನಿಸಲಾಯಿತು. ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ವಿ.ಎ. ಮುಳಗುಂದಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ದೇವಿಂದ್ರಪ್ಪ ಗುಲಗಂಜಿ, ರಾಮಣ್ಣ ಗೋಣೆಪ್ಪನವರ, ಸುಭಾಸ ಹುಲಗೂರ, ಡಾ. ವಿನೋದ ಹೊನ್ನಿಕೊಪ್ಪ, ಡಾ.ಪಿ.ಪಿ. ಶಿರಹಟ್ಟಿ, ಅಶೋಕ ಶಿರಹಟ್ಟಿ, ನೀಲಪ್ಪ ಹತ್ತಿಕಾಳ, ಫಕೀರೇಶ ಕಾಳಪ್ಪನವರು, ಕೇಶವ ಗುಲಗಂಜಿ, ಶಿವಾನಂದಯ್ಯ ಶಂಕಿನಮಠ ಇತರರು ಇದ್ದರು. ಬಿ.ಬಿ. ಬಳಿಗಾರ, ಶಿವಾನಂದ ಅಸುಂಡಿ ನಿರ್ವಹಿಸಿದರು.