ಶಿಗ್ಗಾಂವಿ: ಕ್ರೀಡೆಗಳಿಗೆ ಪರಸ್ಪರ ಸಹೋದರತೆ ಮತ್ತು ಸೌಹಾರ್ದ ಸಂಬಂಧ ಬೆಳೆಸುವ ಶಕ್ತಿ ಇದೆ ಎಂದು ರಂಭಾಪುರಿ ಮಹಾವಿದ್ಯಾಲಯದ ಶೈಕ್ಷಣಿಕ ನಿರ್ದೇಶಕ ಪ್ರೊ. ಪಿ.ಸಿ. ಹಿರೇಮಠ ಹೇಳಿದರು.
ಪಟ್ಟಣದಲ್ಲಿ ಕರ್ನಾಟಕ ವಿಶ್ವವಿದ್ಯಾಲಯ ಮತ್ತು ರಂಭಾಪುರಿ ಜಗದ್ಗುರು ವೀರಗಂಗಾಧರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಆಶ್ರಯದಲ್ಲಿ ಬುಧವಾರ ಏರ್ಪಡಿಸಿದ್ದ ಕವಿವಿ ಪ್ರಥಮ ಮತ್ತು ಅಂತರ ವಲಯ ಮಹಿಳಾ ಮತ್ತು ಪುರುಷರ ಟೇಬಲ್ ಟೆನಿಸ್ ಪಂದ್ಯಾವಳಿಯ ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು.
ಕ್ರೀಡೆಯಲ್ಲಿನ ಸೋಲು-ಗೆಲುವುಗಳು ನಮ್ಮ ಮುಂದಿನ ಜೀವನದಲ್ಲಿ ಸವಾಲುಗಳನ್ನು ಎದುರಿಸಲು ಪಾಠಗಳಾಗಬೇಕು. ಗೆದ್ದವರಿಗೆ ಅಭಿನಂದನೆಗಳು, ಸೋತವರು ಮರಳಿ ಯತ್ನವ ಮಾಡು ಎಂಬಂತೆ ಶ್ರದ್ಧೆಯಿಂದ ಅಭ್ಯಾಸ ಮಾಡಿದರೆ ಯಶಸ್ಸು ಖಂಡಿತ ಸಿಗುತ್ತದೆ. ಕ್ರೀಡೆ ಮತ್ತು ಪಠ್ಯೇತರ ಚಟುವಟಿಕೆಗಳು ವಿದ್ಯಾರ್ಥಿಗಳನ್ನು ಸಾಮಾಜಿಕ ಬದುಕಿಗೆ ಅಣಿಗೊಳಿಸುತ್ತವೆ ಎಂದರು. ಕ್ರೀಡಾಕೂಟದ ಪುರುಷರ ವಿಭಾಗದಲ್ಲಿ ಎಂಇಎಸ್ ಕಾಲೇಜ್ ಶಿರಸಿ ತಂಡ ಪ್ರಥಮ, ರಂಭಾಪುರಿ ಜಗದ್ಗುರು ವೀರಗಂಗಾಧರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ ತಂಡ ದ್ವಿತೀಯ, ಜಿ.ಎಚ್. ಕಾಲೇಜ್ ಹಾವೇರಿ ತಂಡ ತೃತೀಯ, ಮಹಿಳಾ ವಿಭಾಗದಲ್ಲಿ ಜಿ.ಎಚ್. ಕಾಲೇಜ್ ಹಾವೇರಿ ಪ್ರಥಮ ಸ್ಥಾನ. ಎಸ್‌ಡಿಎಂ ಕಾಲೇಜ್ ಹೊನ್ನಾವರ ದ್ವಿತೀಯ. ಗೌರಮ್ಮ ಅಂಕಲಕೋಟಿ ತೃತೀಯ ಸ್ಥಾನ ಪಡೆದರು. ಪ್ರಾಚಾರ್ಯ ಎಸ್.ಎಸ್. ಮಲ್ನಾಡದ, ಪ್ರೊ. ಆರ್.ಎಸ್. ಹೋಗಾರ್ತಿ, ಡಾ. ಬಿ.ವೈ. ತೊಂಡಿಹಾಳ, ಡಾ. ಎಚ್.ಕೆ. ವಿನಯ ಇತರರಿದ್ದರು.