ಜಿಲ್ಲೆ

ನಾಡಿಗೆ ದೊಡ್ಡ ಹಬ್ಬ ನಾಗರ ಪಂಚಮಿ

ಶಿಗ್ಗಾಂವಿ: ನಾಡಿಗೆ ದೊಡ್ಡ ಹಬ್ಬ ಎಂಬ ಖ್ಯಾತಿ ಪಡೆದ ನಾಗರಪಂಚಮಿ ಹಬ್ಬವನ್ನು ಗುರುವಾರ ಪಟ್ಟಣ ಸೇರಿ ತಾಲೂಕಿನಾದ್ಯಂತ ಮಹಿಳೆಯರು, ಮಕ್ಕಳು ಸಂಭ್ರಮದಿಂದ ಆಚರಿಸಿದರು.

ಶ್ರಾವಣ ಮಾಸದ ಮೊದಲ ನಾಗರ ಪಂಚಮಿ ಹಬ್ಬವನ್ನು ನಾಗರಪಂಚಮಿ ದಿನ ಅರಿಶಿಣ ಅಥವಾ ರಕ್ತಚಂದನದಿಂದ ಮಣೆಯ ಮೇಲೆ ನವನಾಗಗಳ ಆಕೃತಿಗಳನ್ನು ಬಿಡಿಸಿ, ಪೂಜೆ ಮಾಡಿ, ಹಾಲು ಮತ್ತು ಅರಳಿನ ನೈವೇದ್ಯವನ್ನು ಅರ್ಪಿಸಿ, ದೇವಸ್ಥಾನಗಳಿಗೆ ಹೋಗಿ ಅಲ್ಲಿನ ನಾಗದೇವತೆಗೆ ಹಾಲೆರೆದು ಪೂಜೆ ಸಲ್ಲಿಸಿದರು.

ಒಂದು ತಿಂಗಳಿನಿಂದ ನಿರಂತರವಾಗಿ ಸುರಿಯುತ್ತಿದ್ದ ಮಳೆ ಎರಡು ಮೂರು ದಿನಗಳಿಂದ ಕೊಂಚ ಮಟ್ಟಿಗೆ ಕಡಿಮೆಯಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಮತ್ತು ಪಟ್ಟಣದ ರಾಚನಕಟ್ಟೆ ಕೆರೆಯ ದಡದಲ್ಲಿ, ಬೆಣ್ಣೆಕಟ್ಟಿ, ಅರಳಿಕಟ್ಟೆ ಹಳಪೇಟೆಯ ಬೇವಿನಕಟ್ಟೆಯಲ್ಲಿರುವ ಬೃಹತ್ ಬೇವಿನ ಮರಗಳಿಗೆ ಹಗ್ಗದಿಂದ ಜೋಕಾಲಿ ಕಟ್ಟಲಾಗಿತ್ತು. ಮಹಿಳೆಯರು, ಮಕ್ಕಳು, ಯುವಕರು ಜೋಕಾಲಿ ಆಡುವ ಮೂಲಕ ಪಂಚಮಿ ಹಬ್ಬವನ್ನು ಸಂಭ್ರಮಿಸಿದರು.