ಜಿಲ್ಲೆ

ಕೇಳೋರ್ಯಾರು ಕನಕ ಭವನದ ಬವಣೆ?

ವಿರೂಪಾಕ್ಷಯ್ಯ ಗುದ್ನಯ್ಯನವರಮಠ

ಶಿಗ್ಗಾಂವಿ: ತಾಲೂಕಿನ ಕುರುಬ ಸಮಾಜದ ಬಹು ನಿರೀಕ್ಷಿತ ಕನಕ ಭವನ ಕಟ್ಟಡ ನಿರ್ಮಾಣ ಕಳಪೆ ಕಾಮಗಾರಿ ನೆಪದಿಂದ ಸ್ಥಗಿತಗೊಂಡು ಎರಡು ವರ್ಷ ಕಳೆದರೂ ಕಟ್ಟಡ ಪೂರ್ಣಗೊಂಡಿಲ್ಲ. ಇದರಿಂದಾಗಿ ಕೋಟ್ಯಂತರ ರೂ. ಅನುದಾನ ಹೊಳೆಯಲ್ಲಿ ಹುಣಸೆಹಣ್ಣು ತೊಳೆದಂತಾಗುತ್ತಿದೆ. ಶಿಗ್ಗಾಂವಿ ಕ್ಷೇತ್ರವು ಸುಮಾರು 40 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಹೊಂದಿದೆ. ಇಲ್ಲಿನ ಕುರುಬ ಸಮಾಜದ ಬೇಡಿಕೆ ಈಡೇರಿಸಲು ಹಿಂದಿನ ಬಿಜೆಪಿ ಸರ್ಕಾರದಲ್ಲಿ ಕ್ಷೇತ್ರದ ಶಾಸಕ ಮತ್ತು ಮುಖ್ಯಮಂತ್ರಿಯೂ ಆಗಿದ್ದ ಬಸವರಾಜ ಬೊಮ್ಮಾಯಿಯವರು ಮೂರು ಕೋಟಿ ರೂ. ಅನುದಾನದಲ್ಲಿ ತಾಲೂಕಿನ ಗಂಜಿಗಟ್ಟಿ ಗ್ರಾಮದ ಬಳಿ ಭವ್ಯವಾದ ಕನಕ ಭವನ ನಿರ್ವಣಕ್ಕೆ ಭೂಮಿ ಪೂಜೆ ನೆರವೇರಿಸಿದ್ದರು. ನಿರ್ವಿುತಿ ಕೇಂದ್ರದಿಂದ ನಿರ್ವಣವಾಗಬೇಕಿದ್ದ ಕನಕ ಭವನ ರಾಜಕೀಯ ಒತ್ತಡದಿಂದ ಸ್ಥಳೀಯ ಗುತ್ತಿಗೆದಾರರ ಮೂಲಕ ನಿರ್ವಣಕ್ಕೆ ಒಪ್ಪಿಗೆ ಪಡೆದುಕೊಂಡಿತು. 2022ರಲ್ಲಿ ಬಸವರಾಜ ಬೊಮ್ಮಾಯಿ ಅವರ ಮಧ್ಯಸ್ಥಿಕೆಯಲ್ಲಿ ಭವನದ ಕಾಮಗಾರಿಯೂ ಪ್ರಾರಂಭವಾಯಿತು. ನಿರ್ಮಾಣ ಪ್ರಾರಂಭದ ಹಂತದಲ್ಲಿ ಯಾವುದೇ ರಾಜಕೀಯ ಒತ್ತಡಕ್ಕೆ ಒಳಗಾಗದೆ ಅತಿ ಹುಮ್ಮಸ್ಸಿನಿಂದ ಮೇಲ್ಛಾವಣಿಯವರೆಗೆ ಕಟ್ಟಡ ನಿರ್ವಣಗೊಂಡಿದೆ. ಕ್ಷೇತ್ರದಲ್ಲಿ ಬದಲಾದ ರಾಜಕೀಯ ಸನ್ನಿವೇಶ, ಸಮಾಜದ ಸ್ಥಳೀಯ ಮುಖಂಡರ ರಾಜಕೀಯ ಕೆಸರೆರಚಾಟ, ಪರಸ್ಪರರಲ್ಲಿ ಹೊಂದಾಣಿಕೆಯಾಗದ್ದರಿಂದ ಕುರುಬ ಸಮಾಜದ ಕನಸಿನ ಕನಕ ಭವನ ನಿರ್ಮಾಣ ಕಾರ್ಯ ಕನಸಾಗಿಯೇ ಉಳಿದಿದೆ. ಅನಾಥ: ಭವನ ನಿರ್ಮಾಣ ಕಾಮಗಾರಿ ಹೊಣೆ ಹೊತ್ತ ಗುತ್ತಿಗೆದಾರರು ಸರಿಯಾಗಿ ಕೆಲಸ ಮಾಡುತ್ತಿಲ್ಲ, ಕಳಪೆ ಗುಣಮಟ್ಟದ ಸಾಮಗ್ರಿ ಬಳಸಿ ಕಟ್ಟಡ ನಿರ್ವಿುಸುತ್ತಿದ್ದಾರೆ ಎಂದು ಆರೋಪಿಸಿ ಕೆಲವು ನಾಯಕರು ತಕರಾರು ತೆಗೆದು ಕಾಮಗಾರಿ ತಡೆಹಿಡಿದಿದ್ದಾರೆ. ಕಾಮಗಾರಿ ಸ್ಥಗಿತಗೊಂಡು ಎರಡು ವರ್ಷ ಕಳೆದರೂ ಕಾಮಗಾರಿ ಪುನರಾರಂಭಿಸದೆ, ಸಮಾಜದ ಮುಖಂಡರ ಇಚ್ಛಾಶಕ್ತಿ ಕೊರತೆಯಿಂದ ಅರ್ಧಕ್ಕೆ ನಿಂತ ಕನಕ ಭವನ ಅನಾಥವಾಗಿದೆ.

ಕಿಡಿಗೇಡಿಗಳ ಕಾಟಕ್ಕೆ ಕಟ್ಟಡ ಹಾಳಾಗುವ ಮೊದಲು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಎಚ್ಚೆತ್ತುಕೊಂಡು ಭವನ ನಿರ್ವಣದ ಕಾಮಗಾರಿ ಪೂರ್ಣಗೊಳಿಸಿ, ಉದ್ಘಾಟಿಸಿ ಸಾಮಾಜಿಕ, ಸಾರ್ವಜನಿಕ ಕಾರ್ಯಕ್ರಮಗಳಿಗೆ ಅನುಕೂಲ ಮಾಡಬೇಕು.  ಸಂತೋಷ ಚಾಕಲಬ್ಬಿ ಸ್ಥಳೀಯ ಗುತ್ತಿಗೆದಾರರು ಮತ್ತು ಸಮಾಜದ ಮುಖಂಡರ ನಿರ್ಲಕ್ಷ್ಯದಿಂದ ಐತಿಹಾಸಿಕ ಕನಕ ಭವನ ಕಟ್ಟಡ ನಿರ್ಮಾಣ ನನೆಗುದಿಗೆ ಬಿದ್ದಿದೆ. ಕೂಡಲೇ ಜಿಲ್ಲಾಧಿಕಾರಿಗೆ ಪತ್ರ ಬರೆದು ಕನಕ ಭವನ ಕಟ್ಟಡ ನಿರ್ಮಾಣ ಕುರಿತು ಮನವಿ ಮಾಡಲಾಗುವುದು. ಫಕೀರಪ್ಪ ಕುಂದೂರ, ಕುರುಬ ಸಮಾಜದ ತಾಲೂಕಾಧ್ಯಕ್ಷ