ಹಾವೇರಿ: ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಯಾಸೀರ್ ಅಹ್ಮದ್‌ಖಾನ್ ಪಠಾಣಗಿಂತ ಅವರ ಪತ್ನಿ ಸಾಯಿದಾಬಾನು ಶ್ರೀಮಂತೆಯಾಗಿದ್ದು, ಒಟ್ಟು ಕುಟುಂಬದ ಆಸ್ತಿ ಮೌಲ್ಯ 3.04 ಕೋಟಿ ರೂ. ಆಗಿದೆ.
ಚುನಾವಣಾಧಿಕಾರಿಗೆ ಶುಕ್ರವಾರ ನಾಮಪತ್ರದೊಂದಿಗೆ ಯಾಸೀರ್‌ಖಾನ್ ಸಲ್ಲಿಸಿದ ಅಫಿಡವಿಟ್‌ನಲ್ಲಿ ಕುಟುಂಬದ ಆಸ್ತಿ ಘೋಷಿಸಿಕೊಂಡಿದ್ದಾರೆ. ಈ ಪ್ರಕಾರ ಯಾಸೀರ್‌ಖಾನ್ ಬಳಿ 85 ಸಾವಿರ ರೂ. ನಗದು, 4.27 ಲಕ್ಷ ರೂ. ಮೌಲ್ಯದ 60 ಗ್ರಾಂ ಚಿನ್ನಾಭರಣ ಸೇರಿದಂತೆ 6.02 ಲಕ್ಷ ರೂ. ಮೌಲ್ಯದ ಚರಾಸ್ತಿಯಿದೆ.
ಹಾನಗಲ್ಲ ತಾಲೂಕು ಬಾದಾಮಗಟ್ಟಿಯಲ್ಲಿ 5.12 ಎಕರೆ ಜಮೀನು, ಬೊಮ್ಮನಹಳ್ಳಿಯಲ್ಲಿ 1.15 ಎಕರೆ, ನೆಲ್ಲಿಕೊಪ್ಪದಲ್ಲಿ 2.10 ಎಕರೆ, ಶಿಗ್ಗಾಂವಿ ತಾಲೂಕು ಹುಲಗೂರು ಗ್ರಾಮಗಳಲ್ಲಿ 1.3 ಎಕರೆ ಸೇರಿ 14.35 ಲಕ್ಷ ರೂ. ಮೌಲ್ಯದ ಕೃಷಿ ಭೂಮಿಯಿದೆ. ಹಾನಗಲ್ಲ ಪುರಸಭೆ ವ್ಯಾಪ್ತಿಯಲ್ಲಿ 10,098 ಚ.ಅಡಿ ವಿಸ್ತೀರ್ಣದ 28 ಲಕ್ಷ ರೂ. ಮೌಲ್ಯದ ಕೃಷಿಯೇತರ ಭೂಮಿ ಸೇರಿದಂತೆ 42.35 ಲಕ್ಷ ರೂ. ಮೌಲ್ಯದ ಸ್ಥಿರಾಸ್ತಿಯಿದೆ. ಪಠಾಣ ಬಳಿ ಯಾವುದೇ ವಾಹನಗಳಿಲ್ಲ. ಸಾಲವನ್ನೂ ಹೊಂದಿಲ್ಲ.
ಹೆಂಡತಿ ಬಳಿ 500 ಗ್ರಾಂ ಚಿನ್ನ :
ಪಠಾಣ ಪತ್ನಿ ಸಾಯಿದಾಬಾನು ಬಳಿ 3 ಲಕ್ಷ ರೂ. ನಗದು, 35.60 ಲಕ್ಷ ರೂ. ಮೌಲ್ಯದ 500 ಗ್ರಾಂ ಚಿನ್ನಾಭರಣ ಸೇರಿದಂತೆ 38.86 ಲಕ್ಷ ರೂ. ಮೌಲ್ಯದ ಚರಾಸ್ತಿಯಿದೆ. ಇವರು 24 ಲಕ್ಷ ರೂ. ಮೌಲ್ಯದ ಕೃಷಿ ಭೂಮಿ ಹೊಂದಿದ್ದು, ಇವರ ಬಳಿ 1.93 ಕೋಟಿ ರೂ. ಮೌಲ್ಯದ ಕೃಷಿಯೇತರ ಭೂಮಿ ಸೇರಿದಂತೆ 2.17 ಕೋಟಿ ಮೌಲ್ಯದ ಸ್ಥಿರಾಸ್ತಿಯಿದೆ. ಪಠಾಣ ದಂಪತಿಗೆ ಮೂವರು ಪುತ್ರರು ಮತ್ತು ಓರ್ವ ಪುತ್ರಿ ಇದ್ದು, ಅವರ ಹೆಸರಿನಲ್ಲಿ ಯಾವುದೇ ಆಸ್ತಿಯಿಲ್ಲ ಎಂದು ಅಫಿಡವಿಟ್‌ನಲ್ಲಿ ಹೇಳಿಕೊಂಡಿದ್ದಾರೆ.