ಶಿಗ್ಗಾಂವಿ: ಶಿಗ್ಗಾಂವಿ ಉಪಚುನಾವಣಾ (Shiggaoin Bypoll) ಕಣ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಕಾಂಗ್ರೆಸ್ ಪಾಳಯದಲ್ಲಿ ಅಸಮಾಧಾನದ ಕಟ್ಟೆ ಹೊಡೆದಿದೆ. ಟಿಕೆಟ್ ವಿಚಾರವಾಗಿ ಮುಖಂಡರ ನಡುವೆ ಶುರುವಾದ ಆಂತರಿಕ ಕಿತ್ತಾಟ ಇದೀಗ ಸಚಿವ ಜಮೀರ್ ಅಹ್ಮದ್ ಅವರ ಕಾರಿನ ಮೇಲೆ ಕಲ್ಲು ತೂರಾಟ ನಡೆಸುವ ಹಂತದವರೆಗೂ ಹೋಗಿದ್ದು, ಶಿಗ್ಗಾಂವಿ ಉಪಚುನಾವಣಾ (Shiggaon Bypoll) ಕಣ ಮತ್ತಷ್ಟು ಸದ್ದು ಮಾಡುತ್ತಿದೆ.
ಟಿಕೆಟ್ ಕೈತಪ್ಪಿದ್ದಕ್ಕೆ ಅಸಮಾಧಾನಗೊಂಡಿರುವ ಮಾಜಿ ಶಾಸಕರಾದ ಅಜ್ಜಂಪೀರ್ ಖಾದ್ರಿ ಮತ್ತು ಮಂಜುನಾಥ ಕುನ್ನೂರು ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದಾರೆ. ಈ ಮೂಲಕ ಶಿಗ್ಗಾಂವಿ ಕ್ಷೇತ್ರದ ಉಪಚುನಾವಣೆ (Shiggaon Bypoll) ಕಾಂಗ್ರೆಸ್ಗೆ ಬಂಡಾಯದ ಬಿಸಿ ತಟ್ಟಿದ್ದು, ಈ ಇಬ್ಬರು ರಾಜ್ಯ ಕಾಂಗ್ರೆಸ್ ನಾಯಕರಿಗೆ ಶಾಕ್ ಕೊಟ್ಟಿದ್ದಾರೆ.
ಟಿಕೆಟ್ ಸಿಗದಿದ್ದಕ್ಕೆ ಅಸಮಾಧಾನಗೊಂಡಿರುವ ಅಜ್ಜಂಪೀರ್ ಖಾದ್ರಿ ಮನವೊಲಿಸಲು ಸಚಿವ ಜಮೀರ್ ಅಹ್ಮದ್ ಖಾನ್ ಕಸರತ್ತು ನಡೆಸಿದ್ದಾರೆ. ಆದರೆ ಸಂಧಾನ ವಿಫಲವಾಗಿದ್ದು, ಖಾದ್ರಿ ಕೊನೆ ಕ್ಷಣದಲ್ಲಿ ಬೈಕ್ನಲ್ಲಿ ದಾಖಲೆ ಹಿಡಿದು ಬಂದು ನಾಮಪತ್ರ ಸಲ್ಲಿಕೆ ಮಾಡಿದರು. ಇನ್ನು ಸಂಧಾನಕ್ಕೆ ಬಂದಿದ್ದ ಸಚಿವ ಜಮೀರ್ ಅಹ್ಮದ್ ಖಾನ್ ಅವರ ಕಾರಿನ ಮೇಲೆ ಖಾದ್ರಿ ಅಭಿಮಾನಿಗಳು ಕಲ್ಲು ತೂರಾಟ ನಡೆಸಿದ್ದು, ಇದರಿಂದ ಕಾರಿನ ಗಾಜು ಪುಡಿಪುಡಿಯಾಗಿದೆ.
ಅಜ್ಜಂಪೀರ್ ಖಾದ್ರಿ ಮಾತ್ರವಲ್ಲದೇ ಪುತ್ರನಿಗೆ ಟಿಕೆಟ್ ಕೇಳಿದ್ದ ಮಾಜಿ ಶಾಸಕ ಮಂಜುನಾಥ ಕುನ್ನೂರು ಟಿಕೆಟ್ ಸಿಗದಿದ್ದಕ್ಕೆ ಅಸಮಾಧಾನಗೊಂಡು ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದು, ಯಾವುದೇ ಕಾರಣಕ್ಕೂ ನಾಮಪತ್ರ ಹಿಂಪಡೆಯುವುದಿಲ್ಲವೆಂದು ರಾಜ್ಯ ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇದೀಗ ಟಿಕೆಟ್ ಹಂಚಿಕೆ ವಿಚಾರ ರಾಜ್ಯ ಕಾಂಗ್ರೆಸ್ ಪಾಳಿಗೆ ಮಗ್ಗಲ ಮುಳ್ಳಾಗಿ ಪರಿಣಮಿಸಿದ್ದು, ಇದು ಬಂಡಾಯದ ಬಿಸಿ ನಡುವೆ ಕಾಂಗ್ರೆಸ್ ಅಭ್ಯರ್ಥಿ ಗೆದ್ದು ಬರುತ್ತಾರೋ ಎನ್ನುವುದನ್ನು ಕಾದುಬೋಡಬೇಕಿದೆ. ಶಿಗ್ಗಾಂವಿ ಉಪಚುನಾವಣೆಗೆ (Shiggaon Bypoll) ಸಂಬಂಧಿಸಿದಂತೆ ನವೆಂಬರ್ 13ರಂದು ಮತದಾನ ನಡೆಯಲಿದ್ದು, ನವೆಂಬರ್ 23ರಂದು ಫಲಿತಾಂಶ ಪ್ರಕಟವಾಗಲಿದೆ.