ಶಿಗ್ಗಾಂವಿ: ರಾಜ್ಯ ಸರ್ಕಾರದಿಂದ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಮೀಸಲಾತಿ ಪ್ರಕಟಿಸುತ್ತಿದ್ದಂತೆ ಪಟ್ಟಣದ ಪುರಸಭೆ ಚುಕ್ಕಾಣಿ ಹಿಡಿಯುವುದು ಬಿಜೆಪಿ- ಕಾಂಗ್ರೆಸ್ ಪಕ್ಷಕ್ಕೆ ಪ್ರತಿಷ್ಠೆಯಾಗಿ ಪರಿಣಮಿಸಿದೆ.
ಅಧ್ಯಕ್ಷ ಸ್ಥಾನ ಸಾಮಾನ್ಯ, ಉಪಾಧ್ಯಕ್ಷ ಸ್ಥಾನಕ್ಕೆ ಹಿಂದುಳಿದ ಅ ವರ್ಗಕ್ಕೆ ಮೀಸಲಾಗಿದೆ. 23 ಸದಸ್ಯ ಬಲ ಹೊಂದಿರುವಂತಹ ಪುರಸಭೆಯಲ್ಲಿ ಯಾವೊಂದು ಪಕ್ಷಕ್ಕೂ ಸ್ಪಷ್ಟ ಬಹುಮತವಿಲ್ಲ. 9 ಬಿಜೆಪಿ, 6 ಕಾಂಗ್ರೆಸ್, 8 ಜನ ಪಕ್ಷೇತರ ಸದಸ್ಯರಿದ್ದಾರೆ. ಯಾವುದೇ ಪಕ್ಷ ಚುಕ್ಕಾಣಿ ಹಿಡಿಯಲು ಪಕ್ಷೇತರರ ಬೆಂಬಲ ಅಗತ್ಯ.
ಬಹುಮತ ಇಲ್ಲದಿದ್ದರೂ ಬಸವರಾಜ ಬೊಮ್ಮಾಯಿ ತಂತ್ರಗಾರಿಕೆಯಿಂದ ಮೊದಲ ಅವಧಿಯಲ್ಲಿ ಬಿಜೆಪಿ ಆಡಳಿತ ನಡೆಸಿದೆ. ಶಿಗ್ಗಾಂವಿ ಕ್ಷೇತ್ರಕ್ಕೆ ಶಾಸಕರಾಗಿ ಬಸವರಾಜ ಬೊಮ್ಮಾಯಿ ಬಂದ ನಂತರದ ದಿನಗಳಿಂದ ಪುರಸಭೆ ಬಹುತೇಕ ಬಿಜೆಪಿ ವಶದಲ್ಲಿದೆ. ಸಂಸದರಾಗಿ ಆಯ್ಕೆಯಾದ ಬಸವರಾಜ ಬೊಮ್ಮಾಯಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಹೀಗಾಗಿ, ಕ್ಷೇತ್ರಕ್ಕೆ ಶೀಘ್ರದಲ್ಲೇ ಉಪಚುನಾವಣೆ ನಡೆಯಲಿದೆ. ಈಗ ಬಸವರಾಜ ಬೊಮ್ಮಾಯಿ ಅವರ ಉತ್ತರಾಧಿಕಾರಿ ಪುತ್ರ ಭರತ್ನೋ ಅಥವಾ ಬೆಂಬಲಿಗರೋ ಎನ್ನುವುದು ಗೌಪ್ಯವಾಗಿದೆ. ಉಪಚುನಾವಣೆ ಲೆಕ್ಕಾಚಾರ ಹಾಕಿಕೊಂಡು ಪುರಸಭೆ ಗದ್ದುಗೆಗೇರುವವರು ಯಾರು ಎಂಬುದನ್ನು ತೀರ್ಮಾನ ಮಾಡಬಹುದು.
ಬಿಜೆಪಿಯಿಂದ ಎರಡು, ಮೂರನೇ ಬಾರಿ ಸದಸ್ಯರಾಗಿ ಆಯ್ಕೆಯಾಗಿರುವ ಸುಭಾಸ ಚೌಹಾಣ, ಶ್ರೀಕಾಂತ ಬುಳ್ಳಕ್ಕನವರ, ಪರಶುರಾಮ ಸೊನ್ನದ, ರೂಪಾ ಬನ್ನಿಕೊಪ್ಪ ಈಗಾಗಲೇ ಅಧ್ಯಕ್ಷರಾಗಿ ಅಧಿಕಾರ ಅನುಭವಿಸಿದ್ದಾರೆ. ಸಿದ್ಧಾರ್ಥಗೌಡ್ರು ಪಾಟೀಲ, ದಯಾನಂದ ಅಕ್ಕಿ, ಮಂಜುನಾಥ ಬ್ಯಾಹಟ್ಟಿ, ಪಕ್ಷೇತರರಾಗಿದ್ದರೂ ಬಿಜೆಪಿಯೊಂದಿಗೆ ಗುರುತಿಸಿಕೊಂಡಿರುವ ರಮೇಶ ವನಹಳ್ಳಿ ಮತ್ತು ಜ್ಯೋತಿ ನಡೂರ ಅವರು ಅಧ್ಯಕ್ಷ ಹುದ್ದೆ ಮೇಲೆ ಕಣ್ಣಿಟ್ಟಿದ್ದಾರೆ.
ಶಿಗ್ಗಾಂವಿ ಕ್ಷೇತ್ರ ಹಾಗೂ ಪುರಸಭೆಯಲ್ಲಿ ಅಧಿಕಾರ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಬಿಜೆಪಿ ಶತಪ್ರಯತ್ನ ನಡೆಸುವುದು ನಿಶ್ಚಿತ. ಮತ್ತೊಂದೆಡೆ ರಾಜ್ಯದ ಆಡಳಿತರೂಢ ಕಾಂಗ್ರೆಸ್ ಪಕ್ಷವೂ ಎರಡೂ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಲಿದೆ. ಉಪಚುನಾವಣೆಯಲ್ಲಿ ಕ್ಷೇತ್ರ ವಶಕ್ಕೆ ಪಡೆಯಲು ಯೋಜಿಸುತ್ತಿದೆ. ಅದರ ತಾಲೀಮು ಆಗಿ ಪುರಸಭೆಯನ್ನು ತೆಕ್ಕೆಗೆ ಹಾಕಿಕೊಳ್ಳಲು ಕಾಂಗ್ರೆಸ್ ತಂತ್ರಗಾರಿಕೆ ಆರಂಭಿಸಿದೆ. ಕಾಂಗ್ರೆಸ್ ತನ್ನ 6 ಸದಸ್ಯರು, 8 ಜನ ಪಕ್ಷೇತರ ಸದಸ್ಯರೊಂದಿಗೆ ಹೊಂದಾಣಿಕೆ ಮಾಡಿಕೊಂಡು ಅಧಿಕಾರ ಹಿಡಿಯಲು ಪ್ರಯತ್ನ ಶುರುವಿಟ್ಟಿದೆ. ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತ ಇರುವುದರಿಂದ ಹಾಗೂ ವಿಧಾನಸಭೆ ಉಪಚುನಾವಣೆ ಹಿನ್ನೆಲೆಯಲ್ಲಿ ಪಕ್ಷೇತರರನ್ನು ಸೆಳೆಯಬಹುದು. ಒಟ್ಟಿನಲ್ಲಿ ಪುರಸಭೆ ಎರಡನೇ ಅವಧಿ ಅಧಿಕಾರ ಯಾರ ಪಾಲಾಗಲಿದೆ ಎಂಬುದು ಕುತೂಹಲ ಮೂಡಿಸಿದೆ.
ನಮ್ಮ ನಾಯಕರಾದ ಬಸವರಾಜ ಬೊಮ್ಮಾಯಿ ಮತ್ತು ಪ್ರಲ್ಹಾದ ಜೋಶಿಯವರ ನಿರ್ದೇಶನದಂತೆ ಪಕ್ಷೇತರ ಸದಸ್ಯರ ಬೆಂಬಲ ಪಡೆದು ಪುರಸಭೆ ಆಡಳಿತ ನಡೆಸುತ್ತೇವೆ. | ಶಿವಾನಂದ ಮ್ಯಾಗೇರಿ, ಬಿಜೆಪಿ ಮಂಡಲ ಅಧ್ಯಕ್ಷ ಬಹುಮತಕ್ಕೆ ನಮಗೆ ಸಂಖ್ಯಾಬಲ ಕಡಿಮೆಯಿದೆ. ಕೆಲ ಬಿಜೆಪಿ ಹಾಗೂ ಪಕ್ಷೇತರ ಸದಸ್ಯರು ನಮ್ಮ ಸಂಪರ್ಕದಲ್ಲಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ಕೊಡುವ ಸದಸ್ಯರೊಂದಿಗೆ ಮುಕ್ತವಾಗಿ ಚರ್ಚೆ ಮಾಡಿ, ತೀಮಾನ ಕೈಗೊಳ್ಳುತ್ತೇವೆ. | ಸೋಮಣ್ಣ ಬೇವಿನಮರದ, ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ