ಜಿಲ್ಲೆ

ಹಸೆಮಣೆ ಏರಬೇಕಿದ್ದ ಜೋಡಿ ಮಸಣಕ್ಕೆ

ವಿರೂಪಾಕ್ಷಯ್ಯ ಗುದ್ನಯ್ಯನವರಮಠ

ಶಿಗ್ಗಾಂವಿ (ಗ್ರಾ): ಇನ್ನೇನು ಕೆಲ ದಿನಗಳಲ್ಲಿ ಹಸೆಮಣೆ ಏರಬೇಕಿದ್ದ ಜೋಡಿಯೊಂದು ತಾಲೂಕಿನ ತಿಮ್ಮಾಪುರ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಶನಿವಾರ ಬೆಳಗ್ಗೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮಸಣ ಸೇರಿದ ಘಟನೆ ನಡೆದಿದೆ.
ಬೆಂಗಳೂರಿನ ನಿವಾಸಿ, ಮೂಲತಃ ಒಡಿಶಾದವರಾದ ಮನೋಹರ ಬಿ. (38), ಪ್ರಿಯಾಂಕಾ (23) ಮೃತಪಟ್ಟ ಜೋಡಿ. ಘಟನೆಯಲ್ಲಿ ಮೃತನ ಮೊದಲ ಪತ್ನಿಯ ಪುತ್ರಿ ಶಿಖಾ (7) ಹಾಗೂ ಮೊನಾಲಿಸಾ (38) ಎಂಬುವರು ಗಾಯಗೊಂಡಿದ್ದು, ಹುಬ್ಬಳ್ಳಿ ಕಿಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮನೋಹರ ಅವರು ಕಾರಿನಲ್ಲಿ ಬೆಂಗಳೂರಿನಿಂದ ಮುಂಬೈಗೆ ಹೋಗುತ್ತಿದ್ದ ವೇಳೆ ಶನಿವಾರ ಬೆಳಗಿನ ಜಾವ ಮುಂದೆ ಹೋಗುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದಿದ್ದರಿಂದ ಅವಘಡ ಸಂಭವಿಸಿದೆ.
ಮನೋಹರನ ಮೊದಲ ಪತ್ನಿ ಕೋವಿಡ್ ಸಮಯದಲ್ಲಿ ಮೃತಪಟ್ಟಿದ್ದರು. ಹೀಗಾಗಿ, ಎರಡನೇ ಮದುವೆಯಾಗಲು ಇತ್ತೀಚೆಗಷ್ಟೇ ಪ್ರಿಯಾಂಕಾಳೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು ಎಂದು ತಿಳಿದು ಬಂದಿದೆ. ಈ ಕುರಿತು ತಡಸ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.