ಜಿಲ್ಲೆ

ದಶಕದ ನಂತರ ತುಂಬಿ ಹರಿದ ಶೆಟ್ಟಿಕೆರೆ : ಹುಳಿಯಾರು ಕಡೆಗೆ ಹೇಮೆ ಹರಿವು

Tumakuru

ತುಮಕೂರು: ಶಾಶ್ವತ ಬರಪೀಡಿತ ತಾಲೂಕು ಎಂಬ ಕುಖ್ಯಾತಿಯ ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ಹೇಮೆ ಹರಿಯಲಾರಂಭಿಸಿದ್ದು, ಶೆಟ್ಟಿಕೆರೆ ಕೆರೆ ತುಂಬಿ ಕೋಡಿ ಬಿದ್ದಿದೆ. ಸ್ಥಳೀಯರೇ ಸ್ವಂತ ಖರ್ಚಿನಲ್ಲಿ ಕೆರೆ ಸ್ವಚ್ಛಗೊಳಿಸಿದ್ದು ಮೈತುಂಬಿದ ಕೆರೆಯ ಸೊಬಗು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ.

71.83ಎಂಸಿಎ್ಟಿ ನೀರಿನ ಸಾಮರ್ಥ್ಯದ ಶೆಟ್ಟಿಕೆರೆ ಕೆರೆ ಶನಿವಾರ ಕೋಡಿ ಬಿದ್ದಿದ್ದು ಜೋಡಿತಿಮ್ಮಲಾಪುರ ಕೆರೆಯ ಕಡೆಗೆ ಹರಿಯಲಾರಂಭಿಸಿದೆ. ಸ್ವಾಭಾವಿಕವಾಗಿ ನೀರು ಹರಿಯಲಿದ್ದು ಹಳ್ಳಿದಲ್ಲಿರುವ ಹತ್ತಾರು ಚೆಕ್‌ಡ್ಯಾಂಗಳು ತುಂಬಿಕೊಂಡು ತಿಮ್ಮಲಾಪುರ ಕೆರೆ ತಲುಪುವುದು ಕನಿಷ್ಠ 20 ದಿನ ಆಗಲಿದ್ದು ಹುಳಿಯಾರು ಭಾಗದ ಜನರು ಚಾತಕ ಪಕ್ಷಿಯಂತೆ ಕಾಯಲಾರಂಭಿಸಿದ್ದಾರೆ.

ಸಾಸಲು ಹಾಗೂ ಶೆಟ್ಟಿಕೆರೆ ಕೆರೆಗೆ ಹೇಮಾವತಿ ಸರಾಗವಾಗಿ ಹರಿದಿದ್ದು ಸಮಾನ ಮನಸ್ಕ ಯುವಕರ ಗುಂಪು ಸ್ವತಃ ಇಲ್ಲಿಂದ ಮುಂದೆ ಸಾಗುವ ಹಳ್ಳದಲ್ಲಿಯೂ ಸ್ವಚ್ಛತೆಯ ಕಾರ್ಯ ನಡೆಯಬೇಕಿದೆ. ಸಂಭ್ರಮಾಚರಣೆಗೆ ಜನರ ಆಸಕ್ತಿ: ತಾಲೂಕಿನ ಜನರ ಕನಸಿನ ಯೋಜನೆ ಶೆಟ್ಟಿಕೆರೆ ಕೆರೆ ತುಂಬುವ ಮೂಲಕ ಸಾಕಾರವಾಗಿರುವ ಹಿನ್ನೆಲೆಯಲ್ಲಿ ಜನರೆಲ್ಲಾ ಒಟ್ಟಿಗೆ ಸೇರಿ ಸಂಭ್ರಮಿಸಲು ಬಯಸಿದ್ದಾರೆ. ಯೋಜನೆಯ ಕೊನೆಯ ಅಂತದ ಯಶಸ್ಸಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಪ್ರಮುಖಪಾತ್ರ ವಹಿಸಿದ್ದು ಅವರ ನೇತೃತ್ವದಲ್ಲಿಯೇ ಅಧಿಕೃತ ಕಾರ್ಯಕ್ರಮ ನಡೆಯಲಿ ಎಂಬ ಆಸೆ ಜನರಿಗಿದೆ.

ನಾಲೆಯಲ್ಲಿ ನೀರು ಹರಿದು ಸಾಕಷ್ಟು ದಿನ ಕಳೆದರೂ ಚುನಾವಣೆ ನೀತಿಸಂಹಿತೆ, ಕರೊನಾ ಕಾರಣಕ್ಕೆ ಸರ್ಕಾರದ ವತಿಯಿಂದ ಯಾವುದೇ ಅಧಿಕೃತ ಕಾರ್ಯಕ್ರಮ ನಡೆಸಲು ಸಾಧ್ಯವಾಗಿಲ್ಲ. ಪ್ರಸ್ತುತ ಶೆಟ್ಟಿಕೆರೆ ಮೈತುಂಬಿದ್ದು ಜನರಿಗೆ ಸಂಭ್ರಮಿಸಲು ಒಂದು ಸಾರ್ವಜನಿಕ ವೇದಿಕೆಯನ್ನು ಜಿಲ್ಲಾಡಳಿತ ಕಲ್ಪಿಸಿಕೊಡಬೇಕಿದೆ. ನಾಲೆಯಲ್ಲಿ ಸ್ವಾಭಾವಿಕವಾಗಿ ನೀರು ಹರಿಯುತ್ತಿರುವ ಕಾರಣಕ್ಕೆ ಈ ಭಾಗದ ಅಡಕೆ, ತೆಂಗು ಉಳಿಸಿಕೊಳ್ಳಲು ರೈತರಿಗೆ ನೆರವಾಗಲಿದೆ. ಮತ್ತಷ್ಟು ದಿನ ನೀರು ಹರಿದರೆ ಹಳ್ಳದ ಸುತ್ತಮುತ್ತಲಿನ ಗ್ರಾಮಗಳ ರೈತರ ಬದುಕು ಉಳಿಯಲಿದೆ.

ಸಾಮರ್ಥ್ಯ 72 ಎಂಸಿಎಫ್‌ಟಿ, ಹಿಡಿದಿದ್ದು 150: ಶೆಟ್ಟಿಕೆರೆ ಕೆರೆ 10 ವರ್ಷದ ನಂತರ ಮೈತುಂಬಿದ್ದು ಸತತ 20 ದಿನಗಳಿಂದ 50 ಕ್ಯೂಸೆಕ್ ನೀರು ನಾಲೆಯಲ್ಲಿ ಹರಿದಿದೆ ಸರ್ಕಾರಿ ದಾಖಲೆಯಲ್ಲಿ ಶೆಟ್ಟಿಕೆರೆ ಕೆರೆಯ ಸಾಮರ್ಥ್ಯ 71.83 ಎಂಸಿಎಫ್‌ಟಿ ಮಾತ್ರ. ಆದರೆ, ಕಳೆದ ಹತ್ತು ವರ್ಷದಿಂದ ಕೆರೆಯಲ್ಲಿ ನಿರಂತರ ಹೂಳು ತೆಗೆದ ಹಿನ್ನೆಲೆಯಲ್ಲಿ ನೀರಿನ ಶೇಖರಣಾ ಸಾಮರ್ಥ್ಯ ದ್ವಿಗುಣವಾಗಿದೆ. ಪ್ರಸ್ತುತ 150 ಎಂಸಿಎಫ್‌ಟಿಗೂ ಹೆಚ್ಚು ನೀರು ಶೇಖರಣೆಯಾಗಿದ್ದು ಕೆರೆ ತುಂಬಲು ತಡವಾಗಿದೆ ಎಂದು ಹೇಮಾವತಿ ಇಲಾಖೆ ಎಇಇ ಖಲೀದ್ ಅಹಮದ್ ಅಭಿಪ್ರಾಯಪಟ್ಟರು. ಡಿಸೆಂಬರ್ ಅಂತ್ಯದವರೆಗೂ ಹೇಮಾವತಿ ನೀರು ಚಿಕ್ಕನಾಯಕನಹಳ್ಳಿ ಬ್ಯಾಂಚ್ ಕೆನಾಲ್‌ನಲ್ಲಿ ಹರಿಯಲಿದ್ದು ಹೆಸರಹಳ್ಳಿ ಹಾಗೂ ಅಂಕಸಂದ್ರದ ಒಡ್ಡು ತುಂಬಿ ಜೋಡಿ ತಿಮ್ಮಲಾಪುರ ಕೆರೆಗೆ ತಲುಪುವ ವಿಶ್ವಾಸವಿದೆ.

ನಾಲೆಯಲ್ಲಿ ಸ್ವಾಭಾವಿಕವಾಗಿ ಹೇಮಾವತಿ ಹರಿಯುತ್ತಿದ್ದು ಶೆಟ್ಟಿಕೆರೆ ಕೆರೆ ಶನಿವಾರ ತುಂಬಿ ಮುಂದಕ್ಕೆ ಹರಿಯಲಾರಂಭಿಸಿದೆ. ತಾಲೂಕಿನ ಎಲ್ಲ ಜನರಂತೆಯೇ ನಾನೂ ಹರ್ಷವಾಗಿದ್ದೇನೆ. ನೀರಿನ ಲಭ್ಯತೆ ಆಧಾರದ ಮೇಲೆ ಇನ್ನೂ ಸಾಕಷ್ಟು ದಿನ ನಾಲೆಯಲ್ಲಿ ನೀರು ಹರಿಯಲಿದೆ. ಉಳಿದ ಕಾಮಗಾರಿ ಶೀಘ್ರ ಆರಂಭಕ್ಕೂ ಕ್ರಮಕೈಗೊಳ್ಳಲಾಗಿದೆ.

ಮಾಧುಸ್ವಾಮಿ ಜಿಲ್ಲಾ ಉಸ್ತುವಾರಿ ಸಚಿವ.