ಹುಬ್ಬಳ್ಳಿ: ಬೆಳಗಾವಿ ಲೋಕಸಭಾ ಸದಸ್ಯ ಹಾಗೂ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಅವರು ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸೌಹಾರ್ದ ಭೇಟಿ ಮಾಡಿದರು.
ಸವದತ್ತಿಯ ಶ್ರೀ ಕ್ಷೇತ್ರ ಶ್ರೀ ರೇಣುಕಾ ಎಲ್ಲಮ್ಮದೇವಿ ದೇವಸ್ಥಾನದ ಅಭಿವೃದ್ಧಿಗೆ 100 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದಕ್ಕೆ ಮೋದಿ ಅವರಿಗೆ ಧನ್ಯವಾದ ತಿಳಿಸಿದರು. ರಾಮದುರ್ಗದಲ್ಲಿರುವ ಐತಿಹಾಸಿಕ ಶಬರಿ ಕೊಳ್ಳವನ್ನು ಸಹ ಅಭಿವೃದ್ಧಿಪಡಿಸುವಂತೆ ವಿನಂತಿಸಲಾಯಿತು.
ಬೆಂಗಳೂರು- ಧಾರವಾಡ ನಡುವೆ ಸಂಚರಿಸುತ್ತಿರುವ "ವಂದೇ ಭಾರತ' ಎಕ್ಸಪ್ರೆಸ್ ರೈಲನ್ನು ಬೆಳಗಾವಿಯವರೆಗೆ ವಿಸ್ತರಿಸಿ ಜಿಲ್ಲೆಯ ಜನರ ಬಹುದಿನದ ಬೇಡಿಕೆ ಪರಿಗಣಿಸುವಂತೆ ಮನವಿ ಮಾಡಿದರು.
ವಿಮಾನಯಾನ ಸೇವೆಗೆ ಸಂಬಂಧಿಸಿದಂತೆ "ಉಡಾನ್ 3.0' ಯೋಜನೆಯ ಅವಧಿಯನ್ನು ಇನ್ನೂ ಹೆಚ್ಚಿಸಿದಲ್ಲಿ ಪ್ರಯಾಣಿಕರಿಗೆ ಅನುಕೂಲವಾಗಲಿದೆ ಮತ್ತು ಬೆಳಗಾವಿ ನಗರ ಹಾಗೂ ಟು ಟಯರ್ ಸಿಟಿಗಳ ವಿಮಾನಯಾನ ಸೇವೆಯ ಬೆಳವಣಿಗೆಗೆ ಪೂರಕವಾಗಲಿದೆ ಎಂದು ಪ್ರಧಾನಿಗೆ ವಿನಂತಿಸಿದರು.
ಬೇಡಿಕೆಯನ್ನು ಅವಲೋಕಿಸಿದ ಮೋದಿಯವರು ಇದನ್ನು ಈಡೇರಿಸುವ ಬಗ್ಗೆ ಕೇಂದ್ರ ರೈಲ್ವೆ ಸಚಿವರಿಗೆ ಅವಶ್ಯ ಸೂಚಿಸುವ ಭರವಸೆ ನೀಡಿರುವುದಾಗಿ ಸಂಸದ ಶೆಟ್ಟರ ತಿಳಿಸಿದ್ದಾರೆ.
ಪ್ರಥಮ ಬಾರಿಗೆ ಸಂಸದರಾಗಿ ಆಯ್ಕೆಯಾದ ಶೆಟ್ಟರ್ ಅವರು, ಪ್ರಧಾನಿ ಮೋದಿ ಅವರು ಚುನಾವಣೆ ಸಂದರ್ಭದಲ್ಲಿ ಸ್ವತಃ ಬೆಳಗಾವಿ ನಗರಕ್ಕೆ ಆಗಮಿಸಿ, ಗೆಲುವಿಗೆ ಅತ್ಯುತ್ತಮ ಸಹಕಾರ ನೀಡಿದ್ದನ್ನು ಸ್ಮರಿಸಿದರು.
ಈ ಸಂದರ್ಭದಲ್ಲಿ ಪ್ರಧಾನಿಯವರನ್ನು ಸನ್ಮಾನಿಸಲು ಹೋದಾಗ "ನಾನು ಸಾಮಾನ್ಯ ಕಾರ್ಯಕರ್ತ, ಸನ್ಮಾನ ಬೇಡ' ಎಂದು ಕುಟುಂಬದ ಆತ್ಮೀಯ ಸದಸ್ಯರಂತೆ ಕುಶಲೋಪರಿಯನ್ನು ಪ್ರಧಾನಿ ವಿಚಾರಿಸಿದರು ಎಂದು ಶೆಟ್ಟರ್ ಹೇಳಿದ್ದಾರೆ.
ಸಂಸದರು ಸವಿ ನೆನಪಿಗಾಗಿ ಹುಬ್ಬಳ್ಳಿ ಸಾಹಿತ್ಯ ಭಂಡಾರ ಪ್ರಕಟ ಮಾಡಿದ "ಟೆಂಪಲ್ ಟ್ರೇಸರಸ್ ಎ ಜನಿರ್ ಥ್ರೂ ಟೈಮ್' ಪುಸ್ತಕವನ್ನು ಪ್ರಧಾನಿಗೆ ನೀಡಿದರು.