ಹುಬ್ಬಳ್ಳಿ: ಕಾಂಗ್ರೆಸ್ ಶಾಸಕರು ಸಂಪರ್ಕದಲ್ಲಿದ್ದಾರೆ ಎಂಬ ಬಿಜೆಪಿ ರಾಷ್ಟ್ರೀಯ ಸಂಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಹೇಳಿಕೆಗೆ ಮಾಜಿ ಸಿಎಂ, ವಿಧಾನ ಪರಿಷತ್ ಸದಸ್ಯ ಜಗದೀಶ ಶೆಟ್ಟರ ತಿರುಗೇಟು ನೀಡಿದ್ದಾರೆ.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂತೋಷ್ ಅವರು ಮೊದಲು ತಮ್ಮ ಪಕ್ಷದಲ್ಲಿದ್ದವರನ್ನು ಉಳಿಸಿಕೊಳ್ಳಲಿ, ಅವರಿಗೆ ಪಕ್ಷದ ಅಸ್ತಿತ್ವ ಉಳಿಸಿಕೊಂಡರೆ ಸಾಕಾಗಿದೆ ಎಂದು ಲೇವಡಿ ಮಾಡಿದರು.
ಬೇರೆ ಪಕ್ಷದವರನ್ನು ಕರೆದುಕೊಂಡು ಬಂದು ಹೊಸ ಸರ್ಕಾರ ಮಾಡೋದನ್ನು ಬಿಡಬೇಕು. ಬರೀ ಆಪರೇಶನ್ ಮಾಡಿ ಸರ್ಕಾರ ಮಾಡೋದೇ ಇವರ ಕೆಲಸವಾಗಿದೆ. ಕರ್ನಾಟಕದಲ್ಲಿ ಬಿಜೆಪಿಗೆ ಒಂದು ಬಾರಿಯೂ ಬಹುಮತ ಸಿಗಲಿಲ್ಲ ಎಂದು ಟೀಕಿಸಿದರು.
ಕಾಂಗ್ರೆಸ್‌ಗೆ ಮತದಾರರು 136 ಸೀಟ್ ಕೊಟ್ಟಿದ್ದಾರೆ. ಸ್ಪಷ್ಟ ಬಹುಮತದ ಸರ್ಕಾರ ರಚನೆ ಆಗಿದೆ. ಇಷ್ಟಿದ್ದರೂ ಬಿಜೆಪಿಯವರು ಬೆಳಗ್ಗೆಯಿಂದ ರಾತ್ರಿಯವರೆಗೂ ಆಪರೇಶನ್ ಗುಂಗಿನಲ್ಲಿ ಇರುತ್ತಾರೆ ಎಂದು ಗೇಲಿ ಮಾಡಿದರು.
ಹಿರಿಯರನ್ನು ಕಡೆಗಣಿಸಿ ಹೊಸಬರನ್ನು ಕರೆದುಕೊಂಡು ಬರುತ್ತಾರೆ. ದಿನದಿಂದ ದಿನಕ್ಕೆ ಬಿಜೆಪಿ ಅಧೋಗತಿಗೆ ಹೋಗುತ್ತಿರುವ ಸಂಕೇತ ಇದು. ಬಿಜೆಪಿ ಈಗ ಮುಳುಗುತ್ತಿರುವ ಹಡಗು. ಒಂದು ವೇಳೆ ಕಾಂಗ್ರೆಸ್ ಶಾಸಕರು ಅವರ ಸಂಪರ್ಕದಲ್ಲಿದ್ದರೆ ನಾಳೆನೇ ಆಪರೇಶನ್ ಸ್ಟಾರ್ಟ್ ಮಾಡಲಿ ಎಂದು ಸವಾಲು ಹಾಕಿದರು.
ಬಿ.ಎಲ್. ಸಂತೋಷ್ ಅವರ ಭಾಷಣ ನಾನು ನೋಡಿಲ್ಲ. ಬಿಜೆಪಿ ಕೆಲವೇ ಜನರ ಕೈಯಲ್ಲಿ ಇದೆ. ಅವರ ಬಗ್ಗೆ ನಾನು ಈಗಾಗಲೇ ಸಾಕಷ್ಟು ಮಾತಾಡಿದ್ದೇನೆ. ದೆಹಲಿಯಲ್ಲಿ ಕುಳಿತ ನಾಯಕರು ಅವರ ಬಗ್ಗೆ ಯೋಚನೆ ಮಾಡಬೇಕು. ರಾಜ್ಯ ಬಿಜೆಪಿ ನಾಯಕರ ಪರಿಸ್ಥಿತಿ ಇಡೀ ಜಗತ್ತಿಗೆ ಗೊತ್ತಾಗಿದೆ ಎಂದರು.