ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಬಿಜೆಪಿಯ ಪೇ ಸಿಎಸ್ಗೆ ಅರ್ಥನೇ ಇಲ್ಲ. ಕಾಂಗ್ರೆಸ್ಸಿನವರು ಮಾಡಿದನ್ನೇ ನಕಲು ಮಾಡಿದರೆ ಜನ ನಂಬುವುದಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಜಗದೀಶ ಶೆಟ್ಟರ್ ಟೀಕಿಸಿದರು.
ಹುಬ್ಬಳ್ಳಿಯಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯ ಪೇ ಸಿಎಸ್, ಕಾಂಗ್ರೆಸ್ನ ಪೇ ಸಿಎಂ ಅಭಿಯಾನದ ಕಾರ್ಬನ್ ಕಾಪಿ. ಬಿಜೆಪಿ ಸರ್ಕಾರದ 4 ವರ್ಷಗಳ ಆಡಳಿತದ ಬಳಿಕ ಅಂದು ಪೇ ಸಿಎಂ ಅಭಿಯಾನ ನಡೆಸಲಾಗಿತ್ತು. ಅಂದಿನ ಮಟ್ಟಿಗೆ ಅದು ಲೇಟೆಸ್ಟ್ ಆಗಿತ್ತು. ಈಗ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಮೂರು ತಿಂಗಳಲ್ಲಿ ಅಭಿಯಾನ ನಡೆಸುತ್ತಾರೆಂದರೆ ಅದಕ್ಕೆ ಅರ್ಥವಿಲ್ಲ ಎಂದರು.
ಗುತ್ತಿಗೆದಾರರ ಬಿಲ್ ಬಾಕಿ ಇರುವುದಕ್ಕೆ ಹಿಂದಿನ ಬಿಜೆಪಿ ಸರ್ಕಾರ ಕಾರಣ. ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದಾಗ ಬೇಕಾಬಿಟ್ಟಿ ಕಾಮಗಾರಿಗೆ ಮಂಜೂರರಿ ನೀಡಿದರು. ಅದಕ್ಕೆಲ್ಲ ಹಣಕಾಸು ಇಲಾಖೆಯ ಒಪ್ಪಿಗೆ ಇರಲಿಲ್ಲ. ಇದೆಲ್ಲ ಬಿಜೆಪಿ ಸರ್ಕಾರದ ರಾಡಿ. ಕಾಂಗ್ರೆಸ್ ಸರ್ಕಾರಕ್ಕೆ 3 ತಿಂಗಳಾಗಿರುವುದರಿಂದ ಬಿಜೆಪಿ ಮಾಡುತ್ತಿರುವ ಆರೋಪಗಳಲ್ಲಿ ಸತ್ಯಾಂಶವಿಲ್ಲ ಎಂದರು.