ಬೆಳಗಾವಿ: ಜಿಲ್ಲೆಯ ಗೋಕಾಕ್ ಮತ್ತು ಹುಕ್ಕೇರಿ ತಾಲೂಕಿನ ಗ್ರಾಮಗಳಿಗೆ ಕುಡಿಯುವ ನೀರಿನ ಪೂರೈಕೆ ಕುರಿತು ಅಂದಾಜು 990 ಕೋಟಿ ರೂ. ವೆಚ್ಚದ ಘಟ್ಟಿಬಸವಣ್ಣ ಕುಡಿಯುವ ನೀರಿನ ಯೋಜನೆಯ ಅನುಷ್ಠಾನಕ್ಕೆ 6 ಟಿಎಂಸಿ ನೀರನ್ನು ಶೇಖರಿಸಲು ಮಾರ್ಕಂಡೇಯ ನದಿಗೆ ಅಡ್ಡಲಾಗಿ ಅಣೆಕಟ್ಟು ನಿರ್ಮಿಸಲು ಅವಶ್ಯವೆನಿಸಿದ ಸುಮಾರು 575 ಹೆಕ್ಟೇರ್ ಅರಣ್ಯ ಪ್ರದೇಶದ ಬಳಕೆಯ ಅನುಮತಿಗೆ ಕರ್ನಾಟಕ ಸರ್ಕಾರವು ಕೇಂದ್ರ ಅರಣ್ಯ ಸಚಿವಾಲಯಕ್ಕೆ ಈಗಾಗಲೇ ಕಳುಹಿಸಿದ ಪ್ರಸ್ತಾವನೆಗೆ ಕೂಡಲೆ ಅನುಮೋದನೆ ನೀಡುವ ಬಗ್ಗೆ ಬೆಳಗಾವಿ ಸಂಸದ ಜಗದೀಶ್ ಶೆಟ್ಟರ್ ಅವರು ಕೇಂದ್ರ ಪರಿಸರ, ಅರಣ್ಯ ಮತ್ತು ಪರ್ಯಾವರಣ ಸಚಿವ ಭೂಪೇಂದ್ರ ಯಾದವ್ ಅವರನ್ನು ಲೋಕಸಭೆಯಲ್ಲಿ ಭೇಟಿ ಮಾಡಿ ಮನವಿ ಅರ್ಪಿಸಿದರು.
ಕರ್ನಾಟಕ ನೀರಾವರಿ ನಿಗಮದ ವತಿಯಿಂದ ಈ ಯೋಜನೆಯ ಅನುಷ್ಠಾನವಾಗಬೇಕಾಗಿದ್ದು, ಇದರ ಅನುಷ್ಠಾನದಿಂದ ಗೋಕಾಕ್, ಹುಕ್ಕೇರಿ, ಬೈಲಹೊಂಗಲ ಮತ್ತು ಸವದತ್ತಿ ತಾಲೂಕಿನಡಿ ಬರುವಂತಹ ಹಲವಾರು ಗ್ರಾಮಗಳಿಗೆ ಕುಡಿಯುವ ನೀರಿನ ಸೌಲಭ್ಯ ದೊರಕಲಿದೆ ಎಂದು ಶೆಟ್ಟರ್ ತಿಳಿಸಿದ್ದಾರೆ.
ಅದರಂತೆ ಈ ಬಗ್ಗೆ ಕೇಂದ್ರ ಸಚಿವರು ಸಕಾರಾತ್ಮಕವಾಗಿಯೂ ಸಹ ಸ್ಪಂದಿಸಿದ್ದು ಪ್ರಸ್ತಾಪಿತ ಯೋಜನೆಗೆ ಶೀಘ್ರ ಕೇಂದ್ರ ಅರಣ್ಯ ಸಚಿವಾಲಯದಿಂದ ಹಸಿರು ನಿಶಾನೆ ಸಿಗುವ ಬಗ್ಗೆ ಭರವಸೆ ಹೊಂದಿದ್ದಾಗಿ ಶೆಟ್ಟರ್ ಅವರು ತಿಳಿಸಿದ್ದಾರೆ.