ಹುಬ್ಬಳ್ಳಿ: ಯಾರ ಬಗ್ಗೆಯೂ ಜಗದೀಶ ಶೆಟ್ಟರ್ ಅಸೂಯೆ ಪಟ್ಟವರಲ್ಲ. ವಿರೋಧಿಗಳನ್ನೂ ಪ್ರೀತಿಸುವ ವ್ಯಕ್ತಿತ್ವ ಹೊಂದಿದವರು ಎಂದು ಶ್ರೀಶೈಲ ಪೀಠದ ಜಗದ್ಗುರು ಶ್ರೀ ಚನ್ನಸಿದ್ಧರಾಮ ಪಂಡಿತಾರಾಧ್ಯ ಸ್ವಾಮೀಜಿ ಹೇಳಿದರು.
ಇಲ್ಲಿನ ದೇಶಪಾಂಡೆ ನಗರದಲ್ಲಿರುವ ಸವಾಯಿ ಗಂಧರ್ವ ಸಭಾಂಗಣದಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರ ಜನ್ಮದಿನ ನಿಮಿತ್ತ ಎಸ್.ಎಸ್. ಶೆಟ್ಟರ್ ಫೌಂಡೇಷನ್ ವತಿಯಿಂದ ಭಾನುವಾರ ಏರ್ಪಡಿಸಿದ್ದ ಬೃಹತ್ ರಕ್ತದಾನ ಶಿಬಿರ ಹಾಗೂ ಸನ್ಮಾನ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಮನಸ್ಸು ಖಾಲಿ ಇಟ್ಟುಕೊಂಡು ಕೈ ತುಂಬ ಕೆಲಸ ಮಾಡುವವರು. ಯಾವ ವ್ಯಕ್ತಿಯು ಯಾರದೇ ಉಸಾಬರಿಗೆ ಹೋಗದೇ ಕೆಲಸ ಮಾಡುತ್ತಾರೋ ಅಂಥವರನ್ನು ದೇವರು ಕಾಪಾಡುತ್ತಾನೆ. ಯಾರಿಗೂ ಕೇಡು ಬಯಸದ ಜಗದೀಶ ಶೆಟ್ಟರ್ ಅಂಥವರಿಗೆ ಯಾರಾದರೂ ಕೆಟ್ಟದ್ದನ್ನು ಬಯಸಿದರೆ ಅಂಥವರನ್ನು ದೇವರೇ ನೋಡಿಕೊಳ್ಳುತ್ತಾನೆ ಎಂದರು.
ಶೆಟ್ಟರ್ ಧಾರ್ವಿುಕವಾಗಿಯೂ ಮನ್ನಣೆಗಳಿಸಿದ್ದಾರೆ. ಈ ಹಿಂದೆ ಬಿಜೆಪಿಯಲ್ಲಿದ್ದು ಎಲ್ಲ ಸ್ಥಾನಗಳನ್ನೂ ಅನುಭವಿಸಿದ್ದಾರೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷದಲ್ಲೂ ಎಲ್ಲ ಅಧಿಕಾರವನ್ನು ಅನುಭವಿಸುವ ಸುಯೋಗ ಲಭಿಸಲಿ ಎಂದು ಹಾರೈಸಿದರು.
ಕಾಶಿ ಪೀಠದ ಜಗದ್ಗುರು ಶ್ರೀ ಡಾ. ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ನೈಸರ್ಗಿಕವಾಗಿ ದೊರೆತಿರುವ ಸಮಯವನ್ನು ಮನುಷ್ಯ ಸದುಪಯೋಗ ಪಡಿಸಿಕೊಳ್ಳುವ ಅಗತ್ಯವಿದೆ. ಈ ಮೂಲಕ ಜೀವನ ಸಾರ್ಥಕಗೊಳಿಸಿಕೊಳ್ಳಬೇಕು ಎಂದರು.
ಕಳೆದ 35 ವರ್ಷಗಳಿಂದ ಸಾಮಾಜಿಕ ಸೇವೆ ಮಾಡಿರುವ ಜಗದೀಶ ಶೆಟ್ಟರ್ ಅವರಿಗೆ ದೇವರು ಉತ್ತಮ ಆರೋಗ್ಯ ನೀಡಿದ್ದಾನೆ. ಅವರಿಂದ ಇನ್ನಷ್ಟು ಸಮಾಜ ಸೇವೆ ಮುಂದುವರಿಯಲಿ ಎಂದರು.
ಶಿರಹಟ್ಟಿ ಫಕೀರೇಶ್ವರ ಸಂಸ್ಥಾನ ಮಠದ ಶ್ರೀ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಮಾತನಾಡಿ, ಕಳೆದ 25 ವರ್ಷಗಳಿಂದ ಜಗದೀಶ ಶೆಟ್ಟರ್ ಅವರನ್ನು ನೋಡುತ್ತ ಬಂದಿದ್ದೇವೆ. ಹಲವು ಅಧಿಕಾರಗಳನ್ನು ಅನುಭವಿಸಿದರೂ ಅವರು ಯಾವತ್ತೂ ಒಂದೇ ನಿಲುವಿಗೆ ಬದ್ಧರಾಗಿರುತ್ತಾರೆ ಎಂದರು.
ಲಿಂಗಾಯತ ಸ್ವಾಮೀಜಿಗಳನ್ನು ಹಾಗೂ ರಾಜಕೀಯ ಮುಖಂಡರನ್ನು ವ್ಯವಸ್ಥಿತವಾಗಿ ಹತ್ತಿಕ್ಕುವ ಕಾರ್ಯ ರಾಜ್ಯದಲ್ಲಿ ನಡೆಯುತ್ತಿದೆ. ಮಠಾಧೀಶರು, ಮುಖಂಡರು ಸಮಾಜದ ಕಂಬಗಳಿದ್ದಂತೆ. ಅವು ಸ್ಥಿರವಾಗಿರುವಂತೆ ನೋಡಿಕೊಳ್ಳಬೇಕು. ಸಮಾಜ, ಮಠಗಳ ಉಳಿವಿಗೆ ಶ್ರಮಿಸಬೇಕು ಎಂದು ಸ್ವಾಮೀಜಿ ಹೇಳಿದರು.
ಮೂರುಸಾವಿರ ಮಠದ ಶ್ರೀ ಗುರುಸಿದ್ದ ರಾಜಯೋಗೀಂದ್ರ ಸ್ವಾಮೀಜಿ ಮಾತನಾಡಿ, ಜಗದೀಶ ಶೆಟ್ಟರ್ ಅವರದ್ದು ಸುಸಂಸ್ಕೃತ ವ್ಯಕ್ತಿತ್ವ. ನಮ್ಮ ಶ್ರೀ ಮಠದ ಏಳಿಗೆಗಾಗಿ ಅವರು ಸದಾ ಶ್ರಮಿಸುತ್ತಿದ್ದಾರೆ. ಇಂತಹ ರಾಜಕಾರಣಿಗಳು ಸದಾ ಜನರ ಮಧ್ಯೆ ಇದ್ದು, ಜನರ ಸಮಸ್ಯೆಗಳಿಗೆ ಧ್ವನಿಯಾಗುತ್ತಾರೆ ಎಂದರು.
ಎಂಎಲ್ಸಿ ಜಗದೀಶ ಶೆಟ್ಟರ್ ಮಾತನಾಡಿ, ಫೌಂಡೇಷನ್ ವತಿಯಿಂದ ಹಲವು ರೀತಿಯ ಸಮಾಜಮುಖಿ ಕಾರ್ಯಗಳನ್ನು ಕಳೆದ 20 ವರ್ಷಗಳಿಂದ ಮಾಡಿಕೊಂಡು ಬರುತ್ತಿದ್ದೇವೆ. ಬಸವಣ್ಣನವರ ಆದರ್ಶಗಳನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಜೀವನದಲ್ಲಿ ಏರಿಳಿತಗಳನ್ನು ಸವಾಲಾಗಿ ಸ್ವೀಕರಿಸಬೇಕು. ಶೆಟ್ಟರ್ ಉಸಾಬಾರಿಗೆ ಬಂದವರಿಗೆ ಏನಾಗುತ್ತದೆ ಎಂಬುದು ಈಗಾಗಲೇ ಹಲವರಿಗೆ ತಿಳಿದಿದೆ. ಈ ಭಾಗದ ಅಭಿವೃದ್ಧಿಗೆ ನಾನು ಸದಾ ಬದ್ಧನಾಗಿದ್ದೇನೆ ಎಂದರು.
ತಿಪಟೂರಿನ ಷಡಕ್ಷರಿ ಮಠದ ಶ್ರೀ ರುದ್ರಮುನಿ ಸ್ವಾಮೀಜಿ, ಶಾಸಕ ಪ್ರಸಾದ ಅಬ್ಬಯ್ಯ ಮಾತನಾಡಿದರು.
ಎಸ್.ಎಸ್. ಶೆಟ್ಟರ್ ಫೌಂಡೇಷನ್ ಅಧ್ಯಕ್ಷ ಸಂಕಲ್ಪ ಶೆಟ್ಟರ ಅಧ್ಯಕ್ಷತೆ ವಹಿಸಿದ್ದರು. ಇದೇ ವೇಳೆ ಜಗದೀಶ ಶೆಟ್ಟರ್ ಅವರನ್ನು ಶ್ರೀಗಳು ಸನ್ಮಾನಿಸಿದರು.
ಉಜ್ಜಯನಿ ಪೀಠದ ಜಗದ್ಗುರು ಡಾ. ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ, ಧಾರವಾಡ ಮುರುಘಾ ಮಠದ ಶ್ರೀ ಡಾ. ಮಲ್ಲಿಕಾರ್ಜುನ ಸ್ವಾಮೀಜಿ, ರುದ್ರಾಕ್ಷಿಮಠದ ಶ್ರೀ ಬಸವಲಿಂಗ ಸ್ವಾಮೀಜಿ, ಎರಡೆತ್ತಿನ ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ ಸೇರಿದಂತೆ ವಿವಿಧ ಮಠಾಧೀಶರು, ಮಾಜಿ ಶಾಸಕರಾದ ನಂಜುಂಡಸ್ವಾಮಿ, ಎಸ್.ಐ. ಚಿಕ್ಕನಗೌಡ್ರ, ಎಂಎಲ್ಸಿ ಪ್ರದೀಪ ಶೆಟ್ಟರ್ ಇತರರು ಇದ್ದರು.
ವಾಯವ್ಯ ಸಾರಿಗೆ ಸಂಸ್ಥೆ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಸಾವಕಾರ ಸ್ವಾಗತಿಸಿದರು. ಹುಡಾ ಮಾಜಿ ಅಧ್ಯಕ್ಷ ನಾಗೇಶ ಕಲಬುರ್ಗಿ ವಂದಿಸಿದರು.
ಹಲವರಿಂದ ರಕ್ತದಾನ
ಹುಬ್ಬಳ್ಳಿ: ಜಗದೀಶ ಶೆಟ್ಟರ್ ಅವರ ಜನ್ಮ ದಿನ ನಿಮಿತ್ತ ದೇಶಪಾಂಡೆ ನಗರದ ಸವಾಯಿ ಗಂಧರ್ವ ಸಭಾಂಗಣದಲ್ಲಿ ರಕ್ತದಾನ ಶಿಬಿರ ಏರ್ಪಡಿಸಲಾಗಿತ್ತು. ಬಹಳಷ್ಟು ಜನರು ರಕ್ತದಾನ ಮಾಡಿದರು. ಕಳೆದ ಎಂಟು ದಿನಗಳಿಂದ ನಗರದ ವಿವಿಧೆಡೆ ನೇತ್ರ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸೆ ಶಿಬಿರಗಳನ್ನು ಏರ್ಪಡಿಸಲಾಗಿತ್ತು.