ಜಿಲ್ಲೆ

ನನ್ನ ಪಕ್ಷಾಂತರದ ಎಫೆಕ್ಟ್ ಕಾಣುತ್ತಿದೆ

Dharwada - Santosh Vaidya

ಹುಬ್ಬಳ್ಳಿ: ಪಂಚ ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ 80 ವರ್ಷ ಮೇಲ್ಪಟ್ಟವರಿಗೆ, ಮೂವರು ಮಾಜಿ ಸಿಎಂಗಳಿಗೆ ಟಿಕೆಟ್ ನೀಡಿದೆ. ಇದನ್ನು ನೋಡಿದರೆ ಪಂಚ ರಾಜ್ಯಗಳ ಚುನಾವಣೆ ಮೇಲೂ ನನ್ನ ಪಕ್ಷಾಂತರದ ಎಫೆಕ್ಟ್ ಆದಂತೆ ಕಾಣುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಹೇಳಿದರು.

ಹುಬ್ಬಳ್ಳಿಯಲ್ಲಿ ಗುರುವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ನನಗೆ, ಲಕ್ಷ್ಮಣ ಸವದಿ, ಕೆ.ಎಸ್. ಈಶ್ವರಪ್ಪಗೆ ಟಿಕೆಟ್ ಕೊಡಲಿಲ್ಲ. ನನಗೆ ಟಿಕೆಟ್ ತಪ್ಪಿಸಲು ಏನು ಕಾರಣ ಅಂತ ಇದುವರೆಗೂ ಹೇಳಿಲ್ಲ. ಅದರ ಪರಿಣಾಮ ಏನಾಯಿತು ಎಂಬುದು ಎಲ್ಲರಿಗೂ ಗೊತ್ತಾಗಿದೆ ಎಂದು ಹೇಳಿದರು.

ಬಿಜೆಪಿಯಲ್ಲಿ ಹಿರಿಯರನ್ನು ದೂರವಿಡುವ ಕೆಲಸ ಬಹಳ ಹಿಂದಿನಿಂದಲೂ ನಡೆದಿದೆ. ಪಕ್ಷಕ್ಕಾಗಿ ಸಂಘಟನೆ ಮಾಡಿದವರನ್ನು, ದುಡಿದವರನ್ನು ದೂರವಿಡಲಾಗುತ್ತಿದೆ. ವಯಸ್ಸಿನ ನೆಪದಲ್ಲಿ ಎಲ್.ಕೆ. ಅಡ್ವಾಣಿ, ಮುರಳಿಮನೋಹರ್ ಜೋಶಿಯವರನ್ನು ಮನೆಗೆ ಕಳುಹಿಸಿದರು. ಈಗ ನೋಡಿದರೆ 80ವರ್ಷ ಮೇಲ್ಪಟ್ಟವರಿಗೆ ಪಂಚ ರಾಜ್ಯಗಳ ಚುನಾವಣೆಯಲ್ಲಿ ಟಿಕೆಟ್ ನೀಡಲಾಗಿದೆ ಎಂದು ಟೀಕಿಸಿದರು.

ರಾಜ್ಯ ಬಿಜೆಪಿಯಲ್ಲಿ ರಿಪೇರಿ ಮಾಡಲಾರದಷ್ಟು ವ್ಯವಸ್ಥೆ ಹದಗೆಟ್ಟು ಹೋಗಿದೆ. ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಪದಗ್ರಹಣಕ್ಕೆ ಯಾವೊಬ್ಬ ಕೇಂದ್ರ ನಾಯಕರು, ವೀಕ್ಷಕರು ಸಹ ಬಂದಿರಲಿಲ್ಲ. ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿಗಳು ಯಾರೂ ಪದಗ್ರಹಣಕ್ಕೆ ಹೋಗಿರಲಿಲ್ಲ. ಒಮ್ಮೆ ನೇಮಕವಾದ ಮೇಲೆ ಎಲ್ಲರೂ ಕೂಡಿ ಕೆಲಸ ಮಾಡಬೇಕೆಂಬ ಮನೋಭಾವ ಬರಬೇಕಿತ್ತು. ಬಿಜೆಪಿಯ ಒಳ ಜಗಳ ಎಲ್ಲಿಗೆ ಹೋಗಿ ಮುಟ್ಟುತ್ತೋ ಗೊತ್ತಿಲ್ಲ ಎಂದು ಲೇವಡಿ ಮಾಡಿದರು.

ಕುಸಿದು ಹೋಗಿರುವ ಬಿಜೆಪಿಗೆ ವಿಜಯೇಂದ್ರ ಅವರಿಂದ ಶಕ್ತಿ ತುಂಬಲು ಸಾಧ್ಯವಿಲ್ಲ. ಬಿಜೆಪಿ ಕಾರ್ಯಕರ್ತರು ದೃತಿಗೆಟ್ಟಿದ್ದಾರೆ, ಭರವಸೆ ಕಳೆದುಕೊಂಡಿದ್ದಾರೆ. ನಾಯಕನಿಲ್ಲದ ಪಕ್ಷ ಅನ್ನೋ ಕೊರಗು ಅವರನ್ನು ಕಾಡುತ್ತಿದೆ ಎಂದರು.