ಹನೂರು: ತಾಲೂಕಿನ ಶೆಟ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭದ್ರಯ್ಯನಹಳ್ಳಿ ಗ್ರಾಮದಲ್ಲಿ ಶನಿವಾರ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸುವಂತೆ ಒತ್ತಾಯಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ಖಾಲಿ ಕೊಡಗಳನ್ನು ಹಿಡಿದ ಪ್ರತಿಭಟನಾಕಾರರು ಗ್ರಾಪಂ ಕಾರ್ಯವೈಖರಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಗ್ರಾಮಸ್ಥರು ಮಾತನಾಡಿ, ಗ್ರಾಮದಲ್ಲಿ 6 ತಿಂಗಳ ಹಿಂದೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿತ್ತು. ಸಮೀಪದ ಜಮೀನಿನ ಪಂಪ್‌ಸೆಟ್‌ಗಳಿಗೆ ತೆರಳಿ ನೀರನ್ನು ಹೊತ್ತು ತರಬೇಕಾದ ಪರಿಸ್ಥಿತಿ ಇದ್ದು, ಇದರಿಂದ ತೊಂದರೆ ಅನುಭವಿಸುತ್ತಿದ್ದೆವು. ನೀರಿನ ಸಮಸ್ಯೆಯನ್ನು ಬಗೆಹರಿಸುವಂತೆ ಒತ್ತಾಯಿಸಲಾಗಿತ್ತು. ಬಳಿಕ ಬೋರ್ ಕೊರೆಸಲಾಗಿದ್ದು, ನೀರು ದೊರಕಿದೆ. ಆದರೆ ಮೋಟಾರ್ ಅಳವಡಿಸಿಲ್ಲ. ಇದರಿಂದ ಬೋರ್ ಕೊರೆಸಿದರೂ ನೀರು ಸಿಗದಂತಾಗಿದೆ. ಮೋಟಾರ್ ಅಳವಡಿಸುವಂತೆ ಕಳೆದ 2 ತಿಂಗಳಿನಿಂದಲೂ ಗ್ರಾಪಂ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಲಾಗಿದೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಈ ಬಗ್ಗೆ ಪಿಡಿಒ ಅವರನ್ನು ವಿಚಾರಿಸಿದರೆ ಉಡಾಫೆಯ ಉತ್ತರವನ್ನು ನೀಡುತ್ತಾರೆ. ಇದೀಗ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದ್ದು, ನೀರಿಗಾಗಿ ಬಿಂದಿಗೆ ಹಿಡಿದು ಅಲೆಯುವಂತಾಗಿದೆ. ಇದರಿಂದ ಕೂಲಿಗೆ ತೆರಳಲು ಸಾಧ್ಯವಾಗುತ್ತಿಲ್ಲ. ಮಕ್ಕಳನ್ನು ಸರಿಯಾದ ಸಮಯಕ್ಕೆ ಶಾಲೆಗೆ ಕಳುಹಿಸಲು ಸಮಸ್ಯೆಯಾಗಿದೆ. ಕೂಲಿಯನ್ನೇ ನಂಬಿಕೊಂಡು ಜೀವನ ನಡೆಸುತ್ತಿರುವ ನಮಗೆ ತುಂಬ ತೊಂದರೆಯಾಗಿದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ಕೂಡಲೇ ಕೊರೆಸಿರುವ ಬೋರ್‌ಗೆ ಮೋಟಾರ್ ಅಳವಡಿಸಿ ನೀರು ಪೂರೈಕೆ ಮಾಡುವುದರ ಮೂಲಕ ಸಮಸ್ಯೆ ಬಗೆಹರಿಸಬೇಕು. ಇಲ್ಲವಾದಲ್ಲಿ ಗ್ರಾಪಂ ಹಾಗೂ ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಮುಖಂಡರಾದ ಕರಿಯಪ್ಪಶೆಟ್ಟಿ, ಮಾದಶೆಟ್ಟಿ, ಮುನಿಶೆಟ್ಟಿ, ಸಿದ್ದರಾಮ, ಕುಮಾರಶೆಟ್ಟಿ, ಪುಷ್ಪಾ, ಯಶೋದಾ, ಪಾಪಮ್ಮ, ಲಕ್ಷ್ಮೀ ಹಾಗೂ ಇನ್ನಿತರರು ಇದ್ದರು.