ಕೊಟ್ಟೂರು: ಕುರಿ ಮತ್ತು ಉಣ್ಣೆ ಅಭಿವೃದ್ಧಿ ಸಹಕಾರ ಸಂಘಗಳ ಮೂಲಕ ಕುರಿಗಾಹಿಗಳಿಗೆ ಔಷಧ ವಿತರಿಸುವ ಯೋಜನೆಯನ್ನು ಮತ್ತೆ ಆರಂಭಿಸಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸಂಘದ ಅಧ್ಯಕ್ಷ ಉಜ್ಜಿನಿ ರುದ್ರಪ್ಪ ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಭ್ರಷ್ಟಾಚಾರ ಮುಚ್ಚಿಕೊಳ್ಳಲು ಸಾಧನಾ ಸಮಾವೇಶ: ಎಂಎಲ್ಸಿ ಎಚ್.ವಿಶ್ವನಾಥ್ ವಾಗ್ದಾಳಿ ಮುಡಾ ಹಗರಣ ಕುರಿತು ಸಿಎಂಗೆ ಚಾಟಿ
ಸಿದ್ದರಾಮಯ್ಯ ಮೊದಲ ಸಲ ಮುಖ್ಯಮಂತ್ರಿಯಾಗಿದ್ದಾಗ ಈ ಯೋಜನೆಯನ್ನು ಜಾರಿಗೆ ತಂದಿದ್ದರು. ಇದರಿಂದಾಗಿ ಕುರಿಗಾರರು ಖಾಸಗಿ ಔಷಧ ಅಂಗಡಿಗೆ ಹೋಗದೆ, ಸಹಕಾರ ಸಂಘದಲ್ಲಿ ಉಚಿತವಾಗಿ ಪಡೆಯುತ್ತಿದ್ದರು. ಇದರಿಂದ ಕುರಿಗಾಹಿಗಳಿಗೆ ಅನುಕೂಲವಾಗಿತ್ತು ಎಂದು ತಿಳಿಸಿದ್ದಾರೆ.
ನಂತರ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಈ ಯೋಜನೆ ರದ್ದುಗೊಳಿಸಿದ್ದರಿಂದ ಕುರಿಗಾಹಿಗಳಿಗೆ ತೊಂದರೆಯಾಗಿದೆ. ಪಶು ಆಸ್ಪತ್ರೆಯಲ್ಲಿ ಔಷಧ ಸಿಗುತ್ತಿಲ್ಲ. ಖಾಸಗಿ ಔಷಧ ಅಂಗಡಿಯಲ್ಲಿ ಸಾವಿರಾರು ರೂ. ಕೊಟ್ಟು ಖರೀದಿಸಿ ಕುರಿಗಳನ್ನು ಬದುಕಿಸಿಕೊಳ್ಳುವ ಅನಿವಾರ್ಯತೆ ಎದುರಾಗಿದೆ ಎಂದು ಹೇಳಿದ್ದಾರೆ.
ವಿಜಯನಗರ ಜಿಲ್ಲೆಯಲ್ಲಿ ಅತಿ ಹೆಚ್ಚು ಕುರಿ ಸಾಕಾಣಿಕೆದಾರರು ಕೊಟ್ಟೂರು ತಾಲೂಕಿನಲ್ಲಿದ್ದಾರೆ. ಕುರಿ ಸಾಕಾಣಿಕೆಯಿಂದಲೇ ಬದುಕು ಕಟ್ಟಿಕೊಂಡಿದ್ದಾರೆ. ರಾಜ್ಯದ ಎಲ್ಲ ಕುರಿಗಾಹಿಗಳು ಹಾಗೂ ಕುರಿಗಳಿಗೂ ಜೀವವಿಮೆ ಮಾಡಿಸುವ ಯೋಜನೆ ಜಾರಿಗೊಳಿಸಿದರೆ, ಕುರಿಗಾರರ ಅಭಿವೃದ್ಧಿ ಮತ್ತು ರಕ್ಷಣೆ ಮಾಡಿದಂತಾಗುತ್ತದೆ. ರಾಜ್ಯದಲ್ಲಿ ಪಶು ಆಸ್ಪತ್ರೆಗಳ ಪುನಶ್ಚೇತನ ಮತ್ತು ಖಾಲಿ ಇರುವ ಪಶು ವೈದ್ಯರ ಹುದ್ದೆಗಳನ್ನು ಕೊಡಲೇ ತುಂಬಬೇಕು ಎಂದು ಉಜ್ಜಿನಿ ರುದ್ರಪ್ಪ ಆಗ್ರಹಿಸಿದ್ದಾರೆ.