ಹಿರೇಕೆರೂರ: ಚಿರತೆ ದಾಳಿಗೆ ಕುರಿಯೊಂದು ಬಲಿಯಾಗಿ, ಕುರಿಗಾಹಿಯೊಬ್ಬ ಗಂಭೀರವಾಗಿ ಗಾಯಗೊಂಡ ಘಟನೆ ತಾಲೂಕಿನ ಬಾವಪುರ ಗ್ರಾಮದ ಹೊರವಲಯದಲ್ಲಿ ಬುಧವಾರ ತಡರಾತ್ರಿ ನಡೆದಿದೆ.
ಬೆಳಗಾವಿ ಜಿಲ್ಲೆಯ ವಾಳಕಿ ಗ್ರಾಮದ ಸಿದ್ದಪ್ಪ ವಿಠ್ಠಲ ಪೂಜಾರಿ ಗಾಯಗೊಂಡ ಕುರಿಗಾಹಿ.
ಎಂದಿನಂತೆ ಕುರಿ ಮೇಯಿಸಿಕೊಂಡು ಬಾವಾಪುರ ಗ್ರಾಮದ ಹೊರವಲಯದಲ್ಲಿನ ಎಲವದಹಳ್ಳಿ ಸಮೀಪದ ರಸ್ತೆ ಪಕ್ಕದಲ್ಲಿ ಕುರಿಗಳನ್ನು ಕೂಡಿ ಹಾಕಿ ಮಲಗಿದ್ದ ಸಂದರ್ಭದಲ್ಲಿ ತಡರಾತ್ರಿ ಚಿರತೆ ಕುರಿಯ ಮೇಲೆ ದಾಳಿ ನಡೆಸಿದೆ. ಈ ವೇಳೆ ಅಲ್ಲಿಯೇ ಮಲಗಿದ್ದ ಮೂವರು ಕುರಿಗಾಯಿಗಳು ಚಿರತೆ ಓಡಿಸಲು ಸಾಕಷ್ಟು ಪ್ರಯುತ್ನಿಸಿದ್ದಾರೆ. ಆದರೆ, ಚಿರತೆ ದಾಳಿಗೆ ಕುರಿ ಸಾವನ್ನಪ್ಪಿದೆ. ದಾಳಿ ತಡೆಯಲು ತೀವ್ರವಾಗಿ ಯತ್ನಿಸಿದ ಕುರಿಗಾಯಿ ಸಿದ್ದಪ್ಪ ಎಂಬಾತನ ಮೈಮೇಲೆ ಎರಗಿ ಚಿರತೆ ದಾಳಿ ನಡೆಸಿದ್ದು, ಅಲ್ಲಿದ್ದ ಮುರಾರಿ ಬಾಳಪ್ಪ ಬೋರಗಾಂವ್, ಮಂಜು ರಾಜಪ್ಪ ವಾಳಕಿ, ಸುರೇಶ ಸಿದ್ದಪ್ಪ ವಾಳಕಿ ಜೋರಾಗಿ ಕಿರಿಚಿಕೊಂಡ ಪರಿಣಾಮ ಚಿರತೆ ಅಲ್ಲಿಂದ ಕಾಲ್ಕಿತ್ತಿದೆ. ನಂತರ ಗಾಯಾಳುವನ್ನು ಚಿಕಿತ್ಸೆಗೆ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಘಟನಾ ಸ್ಥಳಕ್ಕೆ ವಲಯ ಅರಣ್ಯಾಧಿಕಾರಿ ಮತ್ತು ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಗ್ರಾಪಂ ಸದಸ್ಯ ಲಕ್ಷ್ಮಣ ಪೂಜಾರ, ಮುಖಂಡರಾದ ಕಿರಣ ಮೂಡಿ, ಹನುಮಂತ ಮಾಳಾಪುರ ಇದ್ದರು.
ಚಿರತೆ ಸೆರೆಗಾಗಿ ಬೋನು ಇರಿಸಲಾಗಿದೆ. ಬಾವಾಪುರ ಸೇರಿ, ಅರಳಿಕಟ್ಟಿ, ಚಿಕ್ಕಬೂದಿಹಾಳ, ಎಲವದಹಳ್ಳಿ, ಆಲದಗೇರಿ ಗ್ರಾಮಗಳ ಜನರು ರಾತ್ರಿ ಒಬ್ಬರೆ ಓಡಾಡಬಾರದು, ರೈತರು ಜಮೀನುಗಳಿಗೆ ನೀರು ಹಾಯಿಸಲು ಹೋಗಬಾರದು. | ವಿಜಯ್ ಎಂ., ಹಿರೇಕೆರೂರ ತಾಲೂಕು ವಲಯ ಅರಣ್ಯಾಧಿಕಾರಿ