ಜಿಲ್ಲೆ

ಶೆಫರ್ಡ್ ಇಂಡಿಯಾ ಸಮಾವೇಶಕ್ಕೆ ಸಿಎಂ

ರಾಘವೇಂದ್ರಗೌಡ ಭೀ ಪಾಟೀಲ್

ಬೈಲಹೊಂಗಲ: ಬೆಳಗಾವಿಯ ಜಿಲ್ಲಾ ಕ್ರೀಡಾಂಗಣದಲ್ಲಿ ಶೆಫರ್ಡ್ ಇಂಡಿಯಾ ಇಂಟರ್‌ನ್ಯಾಷನಲ್ ವತಿಯಿಂದ ಅ.3ರಂದು ಆಯೋಜಿಸಿರುವ ಬಹತ್ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸನ್ಮಾನ ನಡೆಯಲಿದೆ ಎಂದು ಕರ್ನಾಟಕ ಪ್ರದೇಶ ಕುರುಬರ ಸಂಘದ ಜಿಲ್ಲಾಧ್ಯಕ್ಷ ಮಡ್ದೆಪ್ಪ ತೋಳಿನವರ ಹೇಳಿದರು.

ಪಟ್ಟಣದ ಹಳೆಯ ಆರ್‌ಟಿಒ ಹತ್ತಿರದ ಶ್ರೀ ಮಹಾಂತ ಭವನದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಮಾಜಿ ಸಂಸದ ಎಚ್.ವಿಶ್ವನಾಥ ಮುಂದಾಳತ್ವದಲ್ಲಿ ರಚನೆಯಾದ ಶೆಫರ್ಡ್ ಇಂಡಿಯಾ ಇಂಟರ್‌ನ್ಯಾಷನಲ್ 9ನೇ ವರ್ಷದ ವಾರ್ಷಿಕ ಸಮ್ಮೇಳನದ ಪ್ರಯುಕ್ತ ರಾಷ್ಟ್ರೀಯ ಪ್ರತಿನಿಧಿಗಳ ಮಹಾ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಹಾಲುಮತ ಸಮುದಾಯವನ್ನು ಎಸ್ಟಿ ಪಟ್ಟಿಗೆ ಸೇರಿಸುವ ಕುರಿತು ಕೇಂದ್ರ ಸರ್ಕಾರಕ್ಕೆ ಹಕ್ಕೊತ್ತಾಯ ಹಾಗೂ ಕುರುಬ ಸಮುದಾಯಕ್ಕೆ ಬೆಳಗಾವಿ ಅಥವಾ ಚಿಕ್ಕೋಡಿ ಲೋಕಸಭೆ ಕ್ಷೇತ್ರದ ಟಿಕೆಟ್ ಸೇರಿ ಜಿಪಂ, ತಾಪಂ ಕ್ಷೇತ್ರಗಳಲ್ಲಿಯೂ ಸಮುದಾಯಕ್ಕೆ ಟಿಕೆಟ್ ನೀಡಬೇಕೆಂದು ಆಗ್ರಹಿಸಲಾಗುವುದು ಎಂದರು.

ಸಚಿವರಾದ ಸತೀಶ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳ್ಕರ್, ಶಾಸಕ ರಮೇಶ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ, ಮಹಾಂತೇಶ ಕೌಜಲಗಿ, ವಿಶ್ವಾಸ ವೈದ್ಯ ಭಾಗವಹಿಸಲಿದ್ದಾರೆ ಎಂದರು. ಕರ್ನಾಟಕ ಪ್ರದೇಶ ಕುರುಬರ ಸಂಘದ ರಾಜ್ಯ ಉಪಾಧ್ಯಕ್ಷ ಬಸವರಾಜ ಬಸಳಿಗುಂದಿ, ತಾಲೂಕು ಅಧ್ಯಕ್ಷ ಕುಮಾರ ದಳವಾಯಿ, ಉಪಾಧ್ಯಕ್ಷ ಲಕ್ಷ್ಮಣ ಸೋಮನಟ್ಟಿ, ಎನ್.ಎಸ್.ಗಿಡಮುದಿ, ಬಿ.ಟಿ.ಖಂಡಪ್ಪನವರ, ಎಸ್. ತಲ್ಲೂರ, ಬಸವರಾಜ ಕುರಿ, ಅಜ್ಜಪ್ಪ ಕುರಿ, ಸುನೀಲ ಪಟಾತ, ಮಾರುತಿ ಇಂಗಳಗಿ ಇತರರು ಇದ್ದರು.