ಜಿಲ್ಲೆ

ಅ. 2ರಿಂದ ಎರಡು ದಿನ ರಾಷ್ಟ್ರೀಯ ಸಮಾವೇಶ,ಶೆಫರ್ಡ್ಸ್ ಇಂಡಿಯಾ ಇಂಟರ್ನ್ಯಾಷನಲ್ ಆಯೋಜನೆ

Dharwada - Basavaraj Idli

ಹುಬ್ಬಳ್ಳಿ: ಶೆಫರ್ಡ್ಸ್ ಇಂಡಿಯಾ ಇಂಟರ್ನ್ಯಾಷನಲ್ ವತಿಯಿಂದ ಅಖಿಲ ಭಾರತ ರಾಷ್ಟ್ರೀಯ ಸಮಾವೇಶವನ್ನು ಬೆಳಗಾವಿಯಲ್ಲಿ ಅಕ್ಟೋಬರ್ 2 ಹಾಗೂ 3ರಂದು ಏರ್ಪಡಿಸಲಾಗಿದೆ ಎಂದು ಮಾಜಿ ಸಚಿವ ಎಚ್.ಎಂ. ರೇವಣ್ಣ ತಿಳಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶಾದ್ಯಂತ ಕುರುಬ ಸಮಾಜದ 12 ಕೋಟಿ ಜನಸಂಖ್ಯೆ ಇದೆ. ಆದರೆ, ರಾಜಕೀಯ, ಶೈಕ್ಷಣಿಕ ಹಾಗೂ ವಿವಿಧ ಕ್ಷೇತ್ರದಲ್ಲಿ ಹಿಂದಿದೆ ಎಂದರು.

ಶೆಫರ್ಡ್ಸ್ ಇಂಡಿಯಾ ಸಂಟನೆ ಮೂಲಕ ಸಮಾಜವನ್ನು ಸಂಘಟಿತಗೊಳಿಸುವ ಪ್ರಯತ್ನ ನಡೆದಿದೆ. ದೇಶದಲ್ಲಿ ಸಮಾಜ ಬಲಿಷ್ಠಗೊಳಿಸುವ ಉದ್ದೇಶದಿಂದ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದರು.

ಎರಡು ಬಾರಿ ಸಿಎಂ ಆಗಿ ಆಯ್ಕೆಯಾದ ಸಿದ್ದರಾಮಯ್ಯ ಅವರ ಆಡಳಿತ ವೈಖರಿ ಮೆಚ್ಚಿ ಅ. 3ರಂದು ಅವರಿಗೆ ಸನ್ಮಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಹರಿಯಾಣ, ಮಹಾರಾಷ್ಟ್ರ, ಗೋವಾ, ತಮಿಳುನಾಡು, ಆಂಧ್ರಪ್ರದೇಶ ಸೇರಿ ದೇಶದ ವಿವಿಧ ರಾಜ್ಯದ ರಾಜಕಾರಣಿಗಳು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ರಾಜ್ಯದ ವಿವಿಧೆಡೆಯಿಂದ ಲಾಂತರ ಜನರು ಸೇರುವ ನಿರೀಕ್ಷೆ ಇದೆ ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯ ಹಾಗೂ ಶೆಫರ್ಡ್ಸ್ ಇಂಡಿಯಾ ಇಂಟರ್ನ್ಯಾಷನಲ್ ರಾಷ್ಟ್ರೀಯ ಅಧ್ಯಕ್ಷ ಎಚ್. ವಿಶ್ವನಾಥ ಮಾತನಾಡಿ, ಕುರುಬ ಸಮಾಜ ಸಂಘಟಿಸುವ ಉದ್ದೇಶದಿಂದ 2014ರಿಂದ ಮಹಾತ್ಮ ಗಾಂಧಿ ಜಯಂತಿ ದಿನದಂದು ಸಮಾವೇಶ ಏರ್ಪಡಿಸುತ್ತ ಬರಲಾಗಿದೆ ಎಂದರು.

ಮುಖಂಡರಾದ ಲೋಹಿತ್ ನಾಯಕರ, ನಾಗರಾಜ ಗುರಿಕಾರ, ಹೂವಪ್ಪ ದಾಯಗವಾಡಿ, ಇದ್ದರು.

ರಾಷ್ಟ್ರ ನಾಯಕ ಯಾಕಾಗಬಾರದು?
ಸಮಾವೇಶದ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ರಾಷ್ಟ್ರ ನಾಯಕರನ್ನಾಗಿ ಮಾಡುವ ಉದ್ದೇಶವಿದೆಯೆ? ಎಂಬ ಪ್ರಶ್ನೆಗೆ ಉತ್ತರಿಸಿದ ಎಚ್. ವಿಶ್ವನಾಥ ಅವರು, ಯಾಕಾಗಬಾರದು? ಎಚ್.ಡಿ. ದೇವೇಗೌಡರು ಪ್ರಧಾನಿ ಕನಸು ಕಂಡಿದ್ದರಾ? ಅದರಂತೆ ಸಿದ್ದರಾಮಯ್ಯ ಅವರು ಸಹ ಯಾವುದೇ ಕನಸು ಕಂಡಿಲ್ಲ ಎಂದರು.

ಬಿಜೆಪಿಯಲ್ಲಿ ಕುರುಬ ನಾಯಕರು ಕುರಬರನ್ನು ಹಾಗೂ ವೀರಶೈವ ಲಿಂಗಾಯತ ನಾಯಕರು ಲಿಂಗಾಯತರನ್ನು ತುಳಿಯುತ್ತಿಲ್ಲ. ಆದರೆ, ಈ ಇಬ್ಬರನ್ನು ಬೇರೆಯವರು ತುಳಿಯುತ್ತಿದ್ದಾರೆ. ಅವರನ್ನು ತಿಳಿದುಕೊಳ್ಳುವುದು ಕಷ್ಟ ಸಾಧ್ಯ ಎಂದರು.

ಸನಾತನ ಧರ್ಮದ ಬಗ್ಗೆ ತಮಿಳುನಾಡಿನ ಉದಯನಿಧಿ ಸ್ಟಾಲಿನ್ ವಿವಾದಾತ್ಮಕ ಹೇಳಿಕೆ ಕುರಿತು ಪ್ರತಿಕ್ರಿಸಿದ ಎಚ್. ವಿಶ್ವನಾಥ ಅವರು, ದ್ರಾವಿಡ ಹೋರಾಟದಿಂದ ಬಂದಿರುವ ಸ್ಟಾಲಿನ್, ಅಣ್ಣಾದೊರೆ, ಪೆರಿಯಾರ್ ಎಲ್ಲರೂ ದ್ರಾವಿಡರು. ಪೆರಿಯಾರ್ ಸಿದ್ಧಾಂತ ಒಪ್ಪುವ ದ್ರಾವಿಡರು ಹೀಗೆ ಹೇಳುತ್ತಾರೆ ಎಂದರು.