ಮಂಗಳೂರು: ಶೇಣಿ ಗೋಪಾಲಕೃಷ್ಣ ಭಟ್ ಯಕ್ಷಗಾನ ಕಲಾವಿದರಾಗಿ ಯಕ್ಷ ಸಾಮ್ರಾಜ್ಯದ ಸಾಮ್ರಾಟರಾಗಿ ಮೆರೆದವರು ಎಂದು ವೈದ್ಯ ಡಾ.ರಮಾನಂದ ಬನಾರಿ ಅಭಿಪ್ರಾಯಪಟ್ಟರು.
ಸುರತ್ಕಲ್ ತಡಂಬೈಲ್‌ನ ಶೇಣಿ ಗೋಪಾಲಕೃಷ್ಣ ಭಟ್ ಚಾರಿಟೆಬಲ್ ಟ್ರಸ್ಟ್ ಭಾನುವಾರ ಶ್ರೀ ಶರವು ದೇವಳದ ಆವರಣದಲ್ಲಿ ಆಯೋಜಿಸಿದ ಶೇಣಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಸಂಸ್ಮರಣಾ ಭಾಷಣ ಮಾಡಿದರು.
ಕಲಾವಿದ ತನ್ನನ್ನು ಕಲಾ ಕ್ಷೇತ್ರದಲ್ಲಿ ಯಾವ ರೀತಿ ತೊಡಗಿಸಿಕೊಳ್ಳಬೇಕು ಎನ್ನುವುದಕ್ಕೆ ಶೇಣಿ ಆದರ್ಶ. ಜೀವನದಲ್ಲಿ ಕಲೆಯನ್ನೇ ಉಸಿರನ್ನಾಗಿಸಿದ ಮೇರು ಕಲಾವಿದ. ಅವರ ಹೆಸರಿನ ಪ್ರಶಸ್ತಿಯನ್ನು ಒಡನಾಡಿಯಾಗಿದ್ದ ಬಾಬು ರೈ ಕೋಟೆಕ್ಕಾರ್ ಅವರಿಗೆ ಪ್ರಶಸ್ತಿ ನೀಡುತ್ತಿರುವುದು ಅರ್ಥಪೂರ್ಣ ಎಂದರು.
ಮೃದಂಗ ವಿದ್ವಾನ್ ಬಾಬು ರೈ ಕೋಟೆಕ್ಕಾರು ಅವರಿಗೆ ಶೇಣಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ವಕೀಲ ಕೂಡ್ಲು ಮಹಾಬಲ ಶೆಟ್ಟಿ ಅಭಿನಂದನಾ ಭಾಷಣ ಮಾಡಿದರು. ಶೀ ಕ್ಷೇತ್ರ ಕುಡುಪು ಆನುವಂಶಿಕ ಮೊಕ್ತೇಸರ ವಿದ್ವಾನ್ ಕೃಷ್ಣರಾಜ ತಂತ್ರಿ, ಶರವು ಶ್ರೀ ಕ್ಷೇತ್ರದ ಆಡಳಿತ ಮೊಕ್ತೇಸರ ರಾಘವೇಂದ್ರ ಶಾಸ್ತ್ರಿ ಶುಭಾಶಂಸನೆ ಮಾಡಿದರು.
ಟ್ರಸ್ಟ್ ಅಧ್ಯಕ್ಷ ಎಂ.ಆರ್.ವಾಸುದೇವ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಚಿವ ಕೃಷ್ಣ ಜೆ ಪಾಲೆಮಾರ್, ಮಾಜಿ ಶಾಸಕ ಕೆ.ಜಯರಾಮ ಆಳ್ವ, ಜನತಾ ಬಜಾರ್ ಅಧ್ಯಕ್ಷ ಪುರುಷೋತ್ತಮ ಭಟ್ ಅತಿಥಿಗಳಾಗಿದ್ದರು.
ಟ್ರಸ್ಟ್ ಸದಸ್ಯ ಮಧುಸೂದನ ಅಯ್ಯರ್ ಸ್ವಾಗತಿಸಿದರು. ಸಂಘಟನಾ ಕಾರ್ಯದರ್ಶಿ ಜೆ.ಕೆ.ಭಟ್ ಸೇರಾಜೆ ಕಾರ್ಯಕ್ರಮ ನಿರೂಪಿಸಿದರು.