ಜಿಲ್ಲೆ

ನಿರಾಶ್ರಿತರಿಗೆ ನಿಲುಕದ ಆಶ್ರಯ

ಲಕ್ಷ್ಮೇಶ್ವರ: ಸೂರು ಕೊಟ್ಟು ಪುಣ್ಯಕಟ್ಟಿಕೊಳ್ಳಿ ಎಂದು ಪಟ್ಟಣದ ನಿರಾಶ್ರಿತರು 3 ದಶಕಗಳಿಂದ ಕೇಳುತ್ತಿದ್ದರೂ ಅವರ ಕೂಗು ಅರಣ್ಯರೋಧನವಾಗಿದೆ ಹೊರತು ‘ಆಶ್ರಯ’ದ ಕನಸು ಇನ್ನೂ ನನಸಾಗಿಲ್ಲ. ಫಲಾನುಭವಿಗಳ ಆಯ್ಕೆ ಪಟ್ಟಿಯಲ್ಲೇ ಹೆಸರು ಸೇರುತ್ತಿಲ್ಲ, ಇನ್ನು ಆಶ್ರಯ ಸಿಗುವುದು ಯಾವಾಗ ಎಂಬ ಕೊರಗಿನಲ್ಲೇ ಗುಡಿಸಲಿನಲ್ಲಿ ಕಾಲ ಕಳೆಯುತ್ತಿದ್ದಾರೆ.

ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ, ರಾಮಣ್ಣ ಲಮಾಣಿ ಅವರ ಅಧಿಕಾರಾವಧಿಯಲ್ಲಿ ಮುಕ್ತಿಮಂದಿರ ರಸ್ತೆಯಲ್ಲಿನ ತಮ್ಮಾತಿಮ್ಮಿ ಗುಡ್ಡದ ಪ್ರದೇಶದಲ್ಲಿ 26 ಎಕರೆ (17+9) ಎಕರೆ, ಶಿಗ್ಲಿ ರಸ್ತೆಯಲ್ಲಿ 32 ಎಕರೆ ಜಮೀನು ಖರೀದಿಸಲಾಗಿದೆ. ತಮ್ಮಾತಿಮ್ಮಿ ನಿವೇಶನದಲ್ಲಿ ಗುರುತಿಸಿದ್ದ 828 ನಿವೇಶನಗಳಲ್ಲಿ 428 ನಿವೇಶನಗಳಿಗೆ ಪಟ್ಟಾ ಹಂಚಲಾಗಿದೆ. ಆದರೆ, ಅಲ್ಲಿ ಒಂದಿಷ್ಟೂ ಅಭಿವೃದ್ಧಿಯಾಗಿಲ್ಲ ಮತ್ತು ವಾಸಯೋಗ್ಯವಾಗಿಲ್ಲ. ಇನ್ನು ಶಿಗ್ಲಿ ರಸ್ತೆಯಲ್ಲಿನ 32 ಎಕರೆ ಜಮೀನಿನಲ್ಲಿ ಮಾಜಿ ಶಾಸಕ ರಾಮಣ್ಣ ಲಮಾಣಿಯವರು ತಮ್ಮ ಅಧಿಕಾರದ ಕೊನೆ ಗಳಿಗೆಯಲ್ಲಿ 1116 ನಿವೇಶನಗಳನ್ನು ಗುರುತಿಸಿ ಫಲಾನುಭವಿಗಳ ಆಯ್ಕೆ ಮಾಡುವಷ್ಟರಲ್ಲಿಯೇ ಅಧಿಕಾರಾವಧಿ ಮುಗಿದಿತ್ತು.

ಆಶ್ರಯ ನಿವೇಶನಗಳು ಮಾರಾಟಕ್ಕೆ !

20-30 ವರ್ಷಗಳ ಹಿಂದೆ ಪಟ್ಟಣ ವ್ಯಾಪ್ತಿಯ ರಂಭಾಪುರಿ ನಗರದಲ್ಲಿ 395 ಆಶ್ರಯ ನಿವೇಶನ, ಮಹಾಂತಶೆಟ್ಟರ ನಗರ (ಕರೆಗೋರಿ ಪ್ಲಾಟ್)ದಲ್ಲಿ 277, ಗಡ್ಡದೇವರಮಠ ನಗರದಲ್ಲಿ 290, ಗುಡಿ ರಂಗಾಚಾರ್ಯ ಪ್ಲಾಟ್‌ನಲ್ಲಿ 152, ಮುಕ್ತಿನಗರದಲ್ಲಿ 198 ನಿವೇಶನಗಳನ್ನು ಹಂಚಲಾಗಿತ್ತು. ಆದರೆ, ದುರ್ದೈವದ ಸಂಗತಿ ಎಂದರೆ ಈ ವೇಳೆಯೂ ಅರ್ಹರು ನಿವೇಶನದಿಂದ ವಂಚಿತರಾದರು. ಇದರಲ್ಲಿ ಅರ್ಧದಷ್ಟು ಜನರು ಮಾತ್ರ ನಿವೇಶನ ಪಡೆದುಕೊಂಡಿದ್ದಾರೆ. ವಿಪರ್ಯಾಸದ ಸಂಗತಿ ಎಂದರೆ ಅಂದು ತಮ್ಮ ಪ್ರಭಾವ ಬಳಸಿ ನಿವೇಶನ ಪಡೆದಿದ್ದ ಅನೇಕರು 20 ವರ್ಷದ ನಂತರ ಮಾರಾಟ ಮಾಡಬಹುದು ಎಂಬ ಆದೇಶದನ್ವಯವೇ ಇದೀಗ 5 ಲಕ್ಷ ರೂ.ವರೆಗೆ ನಿವೇಶನ ಮಾರಾಟ ಮಾಡಿ ದುಡ್ಡು ಮಾಡಿಕೊಳ್ಳುತ್ತಿದ್ದಾರೆ.

ಕೊಳಚೆ ಪ್ರದೇಶದಲ್ಲಿ ವಾಸ

30 ವರ್ಷಗಳಿಂದ ಪಟ್ಟಣದ ಇಟ್ಟಿಕೆರೆ ದಂಡೆಯ ಮೇಲೆ ಗುಡಿಸಲು ಕಟ್ಟಿಕೊಂಡು ಬದುಕುತ್ತಿದ್ದ 30ಕ್ಕೂ ಹೆಚ್ಚು ಕುಟುಂಬಗಳಿಗೆ ಆಶ್ರಯ ಪ್ಲಾಟ್ ನೀಡುವ ಭರವಸೆ ನೀಡಿ ಏಳೆಂಟು ವರ್ಷದ ಹಿಂದೆ ತೆರವುಗೊಳಿಸಿದ್ದರು. ಯಾವುದೇ ಸೌಲಭ್ಯವಿಲ್ಲದ ಗುಡಿರಂಗಾಚಾರ್ಯ ಆಶ್ರಯ ಪ್ಲಾಟಿನಲ್ಲಿ ಉದ್ಯಾನಕ್ಕಾಗಿ ಮೀಸಲಿಟ್ಟ ಕೊಳಚೆ ಪ್ರದೇಶದಲ್ಲಿ ಗುಡಿಸಲು ಹಾಕಿಕೊಂಡು ಬದುಕಲು ಅವಕಾಶ ಕಲ್ಪಿಸಲಾಯಿತು. ಕಳೆದ ವರ್ಷ ಅತಿವೃಷ್ಟಿಯಿಂದ ದಿಕ್ಕುತೋಚದಂತಾದ ಹತ್ತಾರು ಕುಟುಂಬಗಳಿಗೆ ಪುರಸಭೆಯ ವಸತಿ ಗೃಹದಲ್ಲಿ ಅವಕಾಶ ಕಲ್ಪಿಸಲಾಗಿದೆ. ಈಗ ಇಲ್ಲಿಂದ ಯಾವಾಗ ಒಕ್ಕಲೆಬ್ಬಿಸುತ್ತಾರೋ ಎಂಬ ಆತಂಕದಲ್ಲಿದ್ದೇವೆ ಎನ್ನುತ್ತಾರೆ ಗುಡಿಸಲು ನಿವಾಸಿಗಳಾದ ಚಾಂದಬೀ ಹಣಗಿಕಟ್ಟಿ, ಹಾಸೀಮ್‌ಸಾಬ ಹರಿವಾಣ, ಅನಸವ್ವ ಬಡಿಗೇರ, ಮಲ್ಲವ್ವ ಮ್ಯಾಗೇರಿ, ಗೂಡುಸಾಬ ಬೇಪಾರಿ.

ಪಟ್ಟಣ ವ್ಯಾಪ್ತಿಯ ಆಶ್ರಯ ಜಮೀನಿನಲ್ಲಿ ಆಶ್ರಯ ಫಲಾನುಭವಿಗಳ ಆಯ್ಕೆಯಲ್ಲಿ ಯಾವುದೇ ಮಾನದಂಡ ಪಾಲನೆಯಾಗಿಲ್ಲ. ಮನೆ ಇದ್ದವರು, ಹಿಂದೆ ಫಲಾನುಭವಿಯಾದವರು, ಸ್ಥಿತಿವಂತರು, ಆಶ್ರಯ ಪ್ಲಾಟ್ ಮಾರಿಕೊಂಡವರು, ಜನಪ್ರತಿನಿಧಿಗಳ ಸಂಬಂಧಿಕರು ಫಲಾನುಭವಿಗಳಾಗಿದ್ದಾರೆ. ಈಗಾಗಲೇ ಆಯ್ಕೆ ಮಾಡಿ ನಿಗಮಕ್ಕೆ ಕಳುಹಿಸಿದ್ದಾರೆನ್ನಲಾದ ಪಟ್ಟಿ ರದ್ದುಪಡಿಸಿ ಪುರಸಭೆ ಸದಸ್ಯರು, ಅಧಿಕಾರಿಗಳನ್ನೊಳಗೊಂಡ ಸಭೆ ಕರೆದು ಅರ್ಹ ಫಲಾನುಭವಿಗಳ ಪಟ್ಟಿ ಸಿದ್ಧಪಡಿಸಿ ಆಗಸ್ಟ್‌ನಲ್ಲಿ ಪಟ್ಟಾ ವಿತರಿಸಲಾಗುವುದು ಮತ್ತು ನಿವೇಶನ ಪಡೆದ ಅರ್ಹರಿಗೆ ಹಂತಹಂತವಾಗಿ ಮನೆ ನಿರ್ಮಿಸಿಕೊಡಲಾಗುವುದು.ಡಾ.ಚಂದ್ರು ಲಮಾಣಿ_ ಶಾಸಕ
ಪಟ್ಟಣ ವ್ಯಾಪ್ತಿಯ ಆಶ್ರಯ ಪ್ಲಾಟ್‌ಗಳಲ್ಲಿ 20/30 ವರ್ಷಗಳ ಹಿಂದೆ ಆಶ್ರಯ ನಿವೇಶನ ಪಡೆದು ಮನೆ ಕಟ್ಟಿಕೊಳ್ಳದೇ ಖಾಲಿ ಬಿಟ್ಟಿರುವುದು ಮತ್ತು ನಿವೇಶನ ಮಾರಾಟ ಮಾಡಿದ್ದಾರೆ ಎನ್ನುವ ಮಾಹಿತಿ ಇದೆ. ಸಮೀಕ್ಷೆ ಕೈಗೊಂಡು ಅಂಥವರಿಗೆ ನೋಟಿಸ್ ನೀಡಲಾಗುವುದು. ಹೊಸ ಆಶ್ರಯ ಜಮೀನಿನಲ್ಲಿ ಫಲಾನುಭವಿಗಳ ಆಯ್ಕೆ ಬಗ್ಗೆ ಶಾಸಕರು ಮತ್ತು ಸದಸ್ಯರ ಸಭೆ ನಡೆಸಿ ತೀರ್ಮಾನಿಸಲಾಗುವುದು.ಶಂಕರ ಹುಲ್ಲಮ್ಮನವರ- ಮುಖ್ಯಾಧಿಕಾರಿ