ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಕಾರ್ಮಿಕ ಸ್ನೇಹಿ ಚಿಂತನೆಯೊಂದಿಗೆ ರಾಜ್ಯ ಕಾರ್ಮಿಕ ಇಲಾಖೆ ಆರಂಭಿಸಿರುವ ಶ್ರಮಿಕ ವಸತಿ ಸಮುಚ್ಛಯ ನಿರ್ಮಾಣ ಯೋಜನೆ ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಅನುಷ್ಟಾನಗೊಂಡಿದ್ದು, ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರ ಹಿತದೃಷ್ಟಿಯಿಂದ ಆರಂಭಿಸಿರುವ ಶ್ರಮಿಕ ವಸತಿ ಯೋಜನೆಗೆ ಎಲ್ಲೆಡೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಇಂಥ ಕಾರ್ಮಿಕರಿಗೆ ಸಮಾಜದಲ್ಲಿ ಗೌರವದ ನೆಲೆ ಒದಗಿಸುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ.
ಓಬದೇನಹಳ್ಳಿಯಲ್ಲಿ ಸೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಓಬದೇನಹಳ್ಳಿಯಲ್ಲಿ 1056 ಸಾಮರ್ಥ್ಯದ ತಾತ್ಕಾಲಿಕ ವಸತಿ ಕಲ್ಪಿಸುವ ಮೂಲಕ ಇಲಾಖೆ ನೆಮ್ಮದಿಯ ಸೂರಿನಾಶ್ರಯ ಕಲ್ಪಿಸಿದೆ. ದೊಡ್ಡಬಳ್ಳಾಪುರ ತಾಲೂಕು ಜಿಲ್ಲೆಯಲ್ಲಿ ದೊಡ್ಡಮಟ್ಟದ ಕೈಗಾರಿಕಾ ವಲಯವಾಗಿ ಗುರುತಿಸಿಕೊಂಡಿದೆ, ವಸತಿ ಸಮುಚ್ಛಯಗಳು, ದೊಡ್ಡದೊಡ್ಡ ಕೈಗಾರಿಕೆಗಳು ನಿರ್ಮಾಣವಾಗುತ್ತಿದ್ದು ನೆರೆ ಜಿಲ್ಲೆ ಸೇರಿ ರಾಜ್ಯದ ಹಲವು ಜಿಲ್ಲೆಗಳ ಕಾರ್ಮಿಕರು ಉದ್ಯೋಗ ಅರಿಸಿಕೊಂಡು ತಾಲೂಕಿನಲ್ಲಿ ನೆಲೆ ನಿಲ್ಲುತ್ತಿದ್ದಾರೆ. ದೂರದೂರುಗಳಿಂದ ಉದ್ಯೋಗ ಅರಸಿ ನಗರಗಳಿಗೆ ವಲಸೆ ಬರುವ ಕಾರ್ಮಿಕರು ಸೂರ್ಯ ಮುಳುಗುವಾಗಲೇ ರಾತ್ರಿ ಕಳೆಯುವುದೇಗೆ ಎಂಬ ಆತಂಕ ಎದುರಿಸುತ್ತಾರೆ. ಅಂತಹವರು ಕೇವಲ ದಿನಕ್ಕೆ 50 ರೂ ಪಾವತಿಸುವ ಮೂಲಕ ಸಕಲ ಸೌಲಭ್ಯಳ ವಸತಿಯಲ್ಲಿ ಆಶ್ರಯಪಡೆಯಬಹುದು.
4 ಬ್ಲಾಕ್‌ಗಳ ನಿರ್ಮಾಣ ಪೂರ್ಣ: ಓಬದೇನಹಳ್ಳಿಯಲ್ಲಿ ಈಗಾಗಲೇ 4 ಬ್ಲಾಕ್‌ಗಳು ನಿರ್ಮಾಣ ಪೂರ್ಣಗೊಂಡಿದ್ದು, ಕಾರ್ಮಿಕರು ಅಡುಗೆ ಮಾಡಿಕೊಳ್ಳಲು ಅನುಕೂಲವಾಗುವಂತೆ ಡಾರ್ಮಿಟರಿಯಲ್ಲಿ ಸುಸಜ್ಜಿತ ಅಡುಗೆ ಮನೆ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಬಿಸಿ ನೀರಿಗಾಗಿ ಸೋಲಾರ್ ಪ್ಯಾನಲ್‌ಗಳ ಅಳವಡಿಕೆ, ಡಾರ್ಮಿಟರಿಯಲ್ಲಿ ಎರಡು ಹಂತದ ಬಂಕರ್ ಬೆಡ್‌ಗಳ ವ್ಯವಸ್ಥೆ ಮಾಡಲಾಗಿದೆ. ಅತ್ಯಂತ ಕಡಿಮೆ ದರದ ಬಾಡಿಗೆ ಪಡೆಯುವುದರಿಂದ ಶ್ರಮಿಕ ವರ್ಗ ನಿರಾಳವಾಗಲಿದೆ ಎಂಬುದು ಯೋಜನೆಯ ಪ್ರಮುಖ ಉದ್ದೇಶವಾಗಿದೆ. ದೊಡ್ಡಬಳ್ಳಾಪುರ ಸೇರಿ ನಗರ ವ್ಯಾಪ್ತಿಯಲ್ಲಿ ಬಾಡಿಗೆ ಮನೆಗಳ ದರ ಗಗನಮುಖಿಯಾಗಿದೆ, ಎಲ್ಲ ಮೂಲಸೌಲಭ್ಯವಿರುವ ಮನೆಗಳನ್ನು ದಕ್ಕಿಸಿಕೊಳ್ಳುವುದು ಶ್ರಮಿಕರಿಗೆ ದುಬಾರಿಯಾಗಿ ಪರಿಣಮಿಸಿದೆ. ಬಾಡಿಗೆ ಜತೆಗೆ ಮುಂಗಡ ಹಣ ಪಾವತಿಸುವುದು ಕಷ್ಟದ ಕೆಲಸವಾಗಿದೆ ಈ ಹಿನ್ನೆಲೆಯಲ್ಲಿ ಶ್ರಮಿಕ ವಸತಿ ಸಮುಚ್ಛಯಗಳು ಕಾರ್ಮಿಕರಿಗೆ ವರದಾನವಾಗಿದೆ.
10 ಜಿಲ್ಲೆಯಲ್ಲಿ ಯೋಜನೆ ಜಾರಿ:
ಕಾರ್ಮಿಕರ ಆರೋಗ್ಯ ಕಾಪಾಡುವುದು ಹಾಗೂ ಅವರಿಗೆ ಆಶ್ರಯ ಕಲ್ಪಿಸುವುದು ಈ ವಸತಿ ಸಮುಚ್ಚಯಗಳ ಮುಖ್ಯ ಉದ್ದೇಶವಾಗಿದೆ. ತಾತ್ಕಾಲಿಕ ವಸತಿ ಸಮುಚ್ಚಯಗಳಿಗಾಗಿ ಈಗಾಗಲೇ ಸರ್ಕಾರ 100 ಕೋಟಿ ರೂಗಳನ್ನು ಮೀಸಲಿಟ್ಟಿದೆ. ರಾಜ್ಯದ 10 ಜಿಲ್ಲೆಗಳಲ್ಲಿ ವಸತಿ ಸಮುಚ್ಚಯಗಳನ್ನು ನಿರ್ಮಿಸಲಾಗುತ್ತಿದೆ.
ಆರೋಗ್ಯ ಸೇವೆಗೆ ಒತ್ತು: ಕಟ್ಟಡ ನಿರ್ಮಾಣ ಕಾರ್ಮಿಕರ ಆರೋಗ್ಯದ ದೃಷ್ಟಿಯಿಂದ ಕೆಲಸದ ಸ್ಥಳದಲ್ಲೇ ಆರೋಗ್ಯ ಸೌಲಭ್ಯಗಳನ್ನು ನೀಡಲಾಗುತ್ತದೆ. ಕಾರ್ಮಿಕರಲ್ಲದೇ ಅವರ ಅವಲಂಬಿತರಿಗೂ ಆರೋಗ್ಯ ಸೇವೆ ಒದಗಿಸಲಾಗುತ್ತದೆ. ಕಾರ್ಮಿಕರಿಗೆ ಸಕಾಲದಲ್ಲಿ ಚಿಕಿತ್ಸೆ ದೊರೆತರೆ ಅವರ ಕೆಲಸದ ಸಾಮರ್ಥ್ಯ ಉತ್ತಮವಾಗುತ್ತದೆ ಎಂಬುದು ಸರ್ಕಾರದ ಆಶಯವಾಗಿದೆ.
ರಾಜ್ಯದ ವಿವಿಧೆಡೆಯಲ್ಲಿ ಸಮುಚ್ಚಯಗಳು: ಶಿವಮೊಗ್ಗ ಜಿಲ್ಲೆಯ ದೇವಟಿ ಕೊಪ್ಪ ಕೈಗಾರಿಕಾ ಪ್ರದೇಶ, ಬೆಳಗಾವಿ ಜಿಲ್ಲೆಯ ಬಿ.ಕೆ.ಕಂಗ್ರಾಳಿ ಕೈಗಾರಿಕಾ ಪ್ರದೇಶ, ಚಾಮರಾಜನಗರ ಜಿಲ್ಲೆಯ ಕೆಲ್ಲಂಬಳ್ಳಿ -ಬದನಕುಪ್ಪೆ ಕೈಗಾರಿಕಾ ಪ್ರದೇಶ, ಕಲಬುರಗಿಯ ನಂದನೂರು ಮತ್ತು ಕಪನೂರು ಕೈಗಾರಿಕಾ ಪ್ರದೇಶ, ಬೆಳಗಾವಿ ಜಿಲ್ಲೆಯ ಕಿತ್ತೂರು ಕೈಗಾರಿಕಾ ಪ್ರದೇಶ, ಕೊಪ್ಪಳ ಜಿಲ್ಲೆಯ ಪದಕಿ ಬಡಾವಣೆ, ದಾವಣಗೆರೆ ಜಿಲ್ಲೆಯ ಜೆ.ಎಚ್.ಪಟೇಲ್ ಬಡಾವಣೆ.
ಯಾವುದೇ ಒಂದು ರಾಷ್ಟ್ರದ ಪ್ರಗತಿಯಲ್ಲಿ ಅಲ್ಲಿನ ಶ್ರಮಿಕರ ಭಾಗವಹಿಸುವಿಕೆಗೆ ಶ್ರಮ ಪ್ರಮುಖ. ಅದಕ್ಕೆ ತಕ್ಕಂತೆ ಸರ್ಕಾರ ಅವರಿಗೆ ಶಕ್ತಿ ತುಂಬುವುದೂ ಅಷ್ಟೇ ಮುಖ್ಯ. ಈ ನಿಟ್ಟಿನಲ್ಲಿ ಶ್ರಮಿಕ ವಸತಿ ಸಮುಚ್ಚಯ ಯೋಜನೆ ಕಾರ್ಮಿಕರ ಬದುಕಿಗೆ ಆಸರೆಯಾಗಿದೆ. ಈ ನಿಟ್ಟಿನಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಈ ಯೋಜನೆ ಜಾರಿಗೆ ಶ್ರಮಿಸಲಾಗುತ್ತಿದೆ.
ಸಂತೋಷ್ ಎಸ್.ಲಾಡ್, ಕಾರ್ಮಿಕ ಸಚಿವ
-------
ಪಂಚ ಗ್ಯಾರಂಟಿಗಳೂ ಸೇರಿ ಹಲವು ಜನೋಪಯೋಗಿ ಕಾರ್ಯಕ್ರಮಗಳನ್ನು ನೀಡುವ ಮೂಲಕ ಜನಪ್ರಿಯಗೊಂಡಿರುವ ರಾಜ್ಯ ಸರ್ಕಾರ ಕಟ್ಟಡ ನಿರ್ಮಾಣ ಹಾಗೂ ಇತರೆ ವಲಸೆ ಕಾರ್ಮಿಕರಿಗೆ ಅವರು ಕೆಲಸ ಮಾಡುವ ಜಾಗಗಳಲ್ಲಿ ಶ್ರಮಿಕ ಹೆಸರಿನಲ್ಲಿ ತಾತ್ಕಾಲಿಕ ಸೂರು ಒದಗಿಸುವ ಮೂಲಕ ಕಾರ್ಮಿಕ ಸ್ನೇಹಿಯಾಗಿದೆ.
ಕೆ.ಎಚ್.ಮುನಿಯಪ್ಪ, ಜಿಲ್ಲಾ ಉಸ್ತುವಾರಿ ಸಚಿವ