ಜಿಲ್ಲೆ

ಕುರಿ ಮೇವಿನ ಲಗಮವ್ವನ ಗುಡ್ಡಕ್ಕೆ ಕೈಹಾಕದಿರಿ

ವಿಜಯವಾಣಿ ಸುದ್ದಿಜಾಲ ಹುಕ್ಕೇರಿ

ತಾಲೂಕಿನ ಗುಡಸ ಗ್ರಾಮದ ಲಗಮವ್ವನ ಗುಡ್ಡ ಮೇವಿಗಾಗಿ ಗಾಯರಾಣ ಜಮೀನು ಎಂದು ನಮೂದಾಗಿದ್ದು, ಇತ್ತೀಚಿನ ದಿನಗಳಲ್ಲಿ ತಾಲೂಕಾಡಳಿತ ಅಕ್ರಮ ಸಕ್ರಮ ನೆಪದಲ್ಲಿ ಖಾಸಗಿಯವರಿಗೆ ಜಮೀನು ಹಸ್ತಾಂತರಿಸಲು ಮುಂದಾಗಿದೆ ಎಂದು ಆರೋಪಿಸಿ ಪಟ್ಟಣದ ಕೋರ್ಟ್ ವತ್ತದಲ್ಲಿ ತಾಲೂಕಿನ ಕುರಿಗಾಹಿಗಳು ಕುರಿಗಳೊಂದಿಗೆ ಆಗಮಿಸಿ ರಸ್ತೆ ಸಂಚಾರ ತಡೆ ನಡೆಸಿ ತಾಲೂಕಾಡಳಿತದ ವಿರುದ್ಧ ಸೋಮವಾರ ಪ್ರತಿಭಟನೆ ನಡೆಸಿದರು.

ಹಾಲುಮತ ಸಮುದಾಯದ ತಾಲೂಕಾಧ್ಯಕ್ಷ ಡಾ.ಜಯಪ್ರಕಾಶ ಕರಜಗಿ ಮಾತನಾಡಿ, ತಾಲೂಕಿನ ಗುಡಸ, ಸಾರಾಪುರ, ಬೆಲ್ಲದ ಬಾಗೇವಾಡಿ, ಕಡಹಟ್ಟಿ ಮತ್ತು ಕೊಟಬಾಗಿ ಗ್ರಾಮದ ಕುರಿಗಾರರು ಪುರಾತನ ಕಾಲದಿಂದ ಗಾಯರಾಣಾ ಜಮೀನು ಎಂದು ದಾಖಲಿಸಿರುವ ಗುಡಸ ಗ್ರಾಮದ ಲಗಮವ್ವನ ಗುಡ್ಡಕ್ಕೆ ಕುರಿ ಮೇಯಿಸಲು ತೆಗೆದುಕೊಂಡು ಹೋಗುತ್ತಾರೆ. ಆದರೆ, ತಾಲೂಕಾಡಳಿತ ಅಕ್ರಮ ಸಕ್ರಮ ನೆಪದಲ್ಲಿ ಖಾಸಗಿಯವರಿಗೆ ಜಮೀನು ಹಸ್ತಾಂತರಿಸಲು ಮುಂದಾಗಿದ್ದು, ಅದನ್ನು ವಿರೋಧಿಸಿ ಹಲವಾರು ಬಾರಿ ತಹಸೀಲ್ದಾರರಿಗೆ ಮನವಿ ಮಾಡಿದ್ದರೂ ಕ್ರಮವಾಗಿಲ್ಲವೆಂದು ಆರೋಪಿಸಿದರು.

ವಕೀಲರಾದ ಭೀಮಸೇನ ಬಾಗಿ ಮತ್ತು ಬಸವರಾಜ ಹಾಲಟ್ಟಿ, ನಿತಿನ ಮುತ್ನಾಳ ಮಾತನಾಡಿ, ಈ ಬಾರಿ ಕೋರ್ಟ್ ವತ್ತದಲ್ಲಿ ಪ್ರತಿಭಟಿಸಿದ್ದು, ಬೇಡಿಕೆ ಈಡೇರದಿದ್ದರೆ ಮಿನಿ ವಿಧಾನಸೌಧದಲ್ಲಿಯೇ ಕುರಿಗಳೊಂದಿಗೆ ಪ್ರತಿಭಟಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಪ್ರತಿಭಟನಾಕಾರರ ಮನವಿ ಸ್ವೀಕರಿಸಿ ಮಾತನಾಡಿದ ತಹಸೀಲ್ದಾರ್ ಮಂಜುಳಾ ನಾಯಕ, ವಾರದೊಳಗಾಗಿ ಕುರಿಗಾರರ ಸಮಸ್ಯೆ ಪರಿಹರಿಸುವುದಾಗಿ ಭರವಸೆ ನೀಡಿದಾಗ ಪ್ರತಿಭಟನಾಕಾರರು ಪ್ರತಿಭಟನೆ ಹಿಂಪಡೆದರು.

ಸಮುದಾಯದ ಯುವ ಘಟಕದ ಅಧ್ಯಕ್ಷ ಶಂಕರ ಹೆಗಡೆ, ಮುಖಂಡರಾದ ಸಚಿನ ಹೆಗಡೆ, ಸಿಂಧೂರ ಕರಿಗಾರ, ಶಿವು

ಮಗದುಮ್ಮ, ಬಸವಣ್ಣಿ ನಿಡಸೋಸಿ, ಲಕ್ಕಪ್ಪ ಹಾಲಟ್ಟಿ, ಸಿದ್ದಪ್ಪ ಗೋಟೂರಿ, ಸತ್ತೆಪ್ಪ ಖಿಲಾರಿ, ಶಂಕರ ಕರಿಗಾರ, ಸಿದ್ದಪ್ಪ ವಂಟಮೂರಿ ಇತರರಿದ್ದರು.