ಮಾಯಕೊಂಡ: ಮಾಯಕೊಂಡ ಭಾಗದಲ್ಲಿ ದಿನೇದಿನೆ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಗ್ರಾಮದ ಒಳ, ಹೊರಗೆ ಸಿಸಿ ಕ್ಯಾಮೆರಾ ಅಳವಡಿಸುವಂತೆ ಒತ್ತಾಯಿಸಿ ಗ್ರಾಮಸ್ಥರು, ರೈತ ಮುಖಂಡರು, ಕನ್ನಡ ಯುವಶಕ್ತಿ ಕೇಂದ್ರದ ಪದಾಧಿಕಾರಿಗಳು ಗುರುವಾರ ಗ್ರಾಪಂ ಪಿಡಿಒ ಶ್ರೀನಿವಾಸ್ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ರೈತ ಮುಖಂಡ ಗೌಡ್ರ ಅಶೋಕ್ ಮಾತನಾಡಿ, ಕಳೆದ ಒಂದೆರಡು ತಿಂಗಳಿನಿಂದ ಗ್ರಾಮದಲ್ಲಿ ಕುರಿ, ಮೇಕೆ ಕಳ್ಳತನ ಹೆಚ್ಚಾಗಿದೆ. ರೈತರ ಅಡಕೆ ತೋಟಗಳಲ್ಲಿನ ಹಸಿ ಅಡಕೆ ಕಳ್ಳತನವಾಗುತ್ತಿದೆ. ಜಮೀನುಗಳಲ್ಲಿನ ಮೋಟಾರ್ ಪಂಪ್‌ಸೆಟ್‌ಗಳ ಸ್ಟಾರ್ಟರ್ ಬೋರ್ಡ್, ಕೇಬಲ್ ಪೈಪ್, ತುಂತುರು ನೀರಾವರಿಗೆ ಅಳವಡಿಸುವ ಜೆಟ್‌ಗಳನ್ನು ಸಹ ಕಳ್ಳರು ಕದ್ದೊಯ್ದಿದ್ದಾರೆ. ಆದರೂ, ಪೊಲೀಸ್ ಇಲಾಖೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.
ರಾಮಜೋಗಿ ಪ್ರತಾಪ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಯುವ ಪೀಳಿಗೆ ಮದ್ಯ, ಜೂಜು, ಮಟ್ಕಾದಂತಹ ದುಶ್ಚಟಗಳಿಗೆ ಬಲಿಯಾಗಿದ್ದು, ಈ ಚಟಗಳಿಗೆ ಹಣ ಹೊಂದಿಸಲು ಕಳ್ಳತನದಂತಹ ಹಾದಿ ಹಿಡಿದಿರುವ ಸಂಶಯ ಇದೆ. ಆದ್ದರಿಂದ ಗ್ರಾಪಂ, ರಕ್ಷಣಾ ಇಲಾಖೆ ಈ ಕೂಡಲೇ ಗ್ರಾಮಗಳ ಆಯಾಕಟ್ಟಿನ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಬೇಕು ಎಂದು ಒತ್ತಾಯಿಸಿದರು.
ಮಾಯಕೊಂಡ ಪೊಲೀಸ್ ಠಾಣೆ ಪಿಎಸ್‌ಐ ಎಸ್.ಬಿ. ಅಜಯ್ ಮಾತನಾಡಿ, ಪೊಲೀಸ್ ಠಾಣಾ ವ್ಯಾಪ್ತಿಯ ಗ್ರಾಪಂಗೆ ಸೇರಿದ ಹಲವು ಗ್ರಾಮಗಳ ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲು ಸ್ಥಳ ಗುರುತಿಸಿ ಆಯಾ ಗ್ರಾಪಂಗಳ ಪಿಡಿಒಗೆ ಮಾಹಿತಿ ಕಳಿಸುತ್ತೇವೆ. ಅಧಿಕಾರಿಗಳು ಸಿಸಿ ಕ್ಯಾಮೆರಾ ಅಳವಡಿಸಿದಲ್ಲಿ ಕಳ್ಳರನ್ನು ಸುಲಭವಾಗಿ ಹಿಡಿಯಲು ನಮಗೆ ಅನುಕೂಲವಾಗುತ್ತದೆ ಎಂದರು.
ಗ್ರಾಪಂ ಉಪಾಧ್ಯಕ್ಷ ಬಸವರಾಜಪ್ಪ, ಕನ್ನಡ ಯುವಶಕ್ತಿ ಕೇಂದ್ರದ ಮಾಜಿ ಅಧ್ಯಕ್ಷ ಎಂ.ಜಿ. ಗುರುನಾಥ್, ಮುಖಂಡರಾದ ಬಿ.ಟಿ. ಪ್ರಭು, ರಾಮಜೋಗಿ ಪ್ರತಾಪ್, ಹುಮರ್‌ಉಲ್ಲಾ, ರಾಕೇಶ್, ಬಸವರಾಜ್ ಮೆದಕೆರಪ್ಪ ಇತರರಿದ್ದರು.