ಜಿಲ್ಲೆ

ಕುರಿ ಕಳವು ಮಾಡಲು ಬಂದು ಪೊಲೀಸರ ಅತಿಥಿಯಾದರು!

ಕೆ.ಎನ್.ರಾಘವೇಂದ್ರ

ಶ್ರೀರಂಗಪಟ್ಟಣ: ಜಮೀನಿನಲ್ಲಿ ಮೇಯುತ್ತಿದ್ದ ಕುರಿಗಳನ್ನು ಕಳವು ಮಾಡಲು ಮುಂದಾಗಿದ್ದ ಇಬ್ಬರು ಗ್ರಾಮಸ್ಥರಿಗೆ ಸಿಕ್ಕಿಬಿದ್ದಿದ್ದು, ಇದೀಗ ಪೊಲೀಸರ ವಶದಲ್ಲಿದ್ದಾರೆ.

ಮೈಸೂರಿನ ಸದ್ದಾಂ ಮತ್ತು ರಿಯಾಜ್ ಸಿಕ್ಕಿಬಿದ್ದವರು. ತಾಲೂಕಿನ ಅರಕೆರೆ ಪೊಲೀಸ್ ಠಾಣೆ ವ್ಯಾಪ್ತಿಯ ಮೈಸೂರು-ಮಹದೇವಪುರ ರಸ್ತೆಯ ಹಂಪಾಪುರ ಗೇಟ್ ಬಳಿ ಹಂಪಾಪುರ ಗ್ರಾಮದ ಮಹದೇವು ಎಂಬುವರು ಶನಿವಾರ ಜಮೀನಿನಲ್ಲಿ ಕುರಿಗಳನ್ನು ಮೇಯುಸುತ್ತಿದ್ದರು. ಈ ವೇಳೆ ಬೈಕ್‌ನಲ್ಲಿ ಆಗಮಿಸಿದ ಇಬ್ಬರು ಹೊಂಚು ಹಾಕಿ ಎರಡು ಕುರಿಗಳನ್ನು ಕದ್ದು ಹೊತ್ತೊಯ್ಯಲು ಮುಂದಾಗಿದ್ದಾರೆ. ಇದನ್ನು ಕಂಡ ಸ್ಥಳೀಯರು ಇಬ್ಬರು ಆರೋಪಿಗಳನ್ನು ದ್ವಿಚಕ್ರ ವಾಹನಗಳಲ್ಲಿ ಅಟ್ಟಾಡಿಸಿ ಹಿಡಿದು ಗ್ರಾಮದ ಜಮೀನಿನಲ್ಲಿ ಮರಕ್ಕೆ ಕಟ್ಟಿ ಹಾಕಿದರು. ಬಳಿಕ ಗ್ರಾಮಸ್ಥರು ಅರಕೆರೆ ಪೊಲೀಸ್ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಇಬ್ಬರನ್ನು ವಶಕ್ಕೆ ತೆಗೆದುಕೊಂಡರು.