ಜಿಲ್ಲೆ

ಸಮುದಾಯದ ಸಹಭಾಗಿತ್ವದಲ್ಲಿ ಸ್ವಚ್ಛತಾ ಕಾರ್ಯಾಚರಣೆ : ದ.ಕ. ಸ್ವಚ್ಛತಾ ರಾಯಭಾರಿ ಶೀನ ಶೆಟ್ಟಿ

Mangaluru - Hariprasad Rai



ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಸ ವಿಲೇವಾರಿ ಸಮಸ್ಯೆ ಗಂಭೀರ ಸ್ವರೂಪದಲ್ಲಿದ್ದು ಸ್ವಚ್ಛತೆಗಾಗಿ ತುರ್ತು ಪರಿಸ್ಥಿತಿ ಘೋಷಿಸುವ ಸ್ಥಿತಿ ಇದೆ. ಸ್ವಚ್ಛ ಗ್ರಾಮ , ಸ್ವಚ್ಛ ಜಿಲ್ಲೆಗಾಗಿ ಸರ್ಕಾರ ಹಾಗೂ ಸಮುದಾಯದ ಜಂಟಿ ಕಾರ್ಯಾಚರಣೆ ಅವಶ್ಯವಾಗಿದೆ ಎಂದು ಮುಡಿಪು ಜನಶಿಕ್ಷಣ ಟ್ರಸ್ಟ್ ನಿರ್ದೇಶಕ, ದ.ಕ. ಸ್ವಚ್ಛತಾ ರಾಯಭಾರಿ ಶೀನ ಶೆಟ್ಟಿ ಹೇಳಿದರು.
ಮಂಗಳೂರು ಪ್ರೆಸ್‌ಕ್ಲಬ್‌ನಲ್ಲಿ ಬುಧವಾರ ಪ್ರೆಸ್ ಕ್ಲಬ್ ಗೌರವ ಅತಿಥಿ ಕಾರ್ಯಕ್ರಮದಲ್ಲಿ ಗೌರವ ಪುರಸ್ಕಾರ ಸ್ವೀಕರಿಸಿ ಮಾತನಾಡಿದ ಅವರು ‘ಪ್ಲಾಸ್ಟಿಕ್ ಬಳಕೆ ಮಿತಿ ಮೀರಿದ್ದು ಪರಿಸರ ಮಾಲಿನ್ಯಕ್ಕೆ ಮುಖ್ಯ ಕಾರಣವಾಗಿದೆ. 2016ರಲ್ಲಿ ರಾಜ್ಯ ಸರ್ಕಾರ ಪ್ಲಾಸ್ಟಿಕ್ ಬಳಕೆ ನಿಷೇಧಿಸಿದ್ದರೂ ಪರಿಣಾಮಕಾರಿಯಾಗಿ ಜಾರಿಯಾಗಿಲ್ಲ. ಜಿಲ್ಲಾಡಳಿತ, ಜನಪ್ರತಿನಿಧಿಗಳು ಪ್ಲಾಸ್ಟಿಕ್ ಬಳಕೆ ವಿರುದ್ಧ ಜಾಗೃತಿ,
ಕಾರ್ಯಾಚರಣೆ ನಡೆಸಿದರೂ ಪ್ಲಾಸ್ಟಿಕ್ ಮುಕ್ತ ಜಿಲ್ಲೆ ಸಾಧ್ಯವಾಗಿಲ್ಲ. ಸಮಾಜ ಹಾಗೂ ಸರ್ಕಾರ ಒಟ್ಟಾಗಿ ಕಾರ್ಯಾಚರಣೆ ನಡೆಸಿದರೆ ಮಾತ್ರ ಶೂನ್ಯ ಪ್ಲಾಸ್ಟಿಕ್ ಬಳಕೆ ಅನುಷ್ಠಾನಕ್ಕೆ ತರಲು ಸಾಧ್ಯವಿದೆ ಎಂದರು.
ಆದಿವಾಸಿಗಳು ಪ್ರಕೃತಿಯನ್ನು ಬಿಟ್ಟು ಜೀವನ ನಡೆಸುವುದಿಲ್ಲ. ನಾವು ಕೂಡ ಪ್ರಕೃತಿಯ ಜತೆಯಲ್ಲೇ ಜೀವನ ನಡೆಸಬೇಕು. ಹಾಗಾದರೆ ಪ್ರಕೃತಿ ಕೂಡ ಮಾನವನಿಗೆ ಮುನಿಯುವುದಿಲ್ಲ. ಪ್ರಕೃತಿಯೇ ದೇವರು ಆಗಬೇಕು . ಸ್ವಚ್ಛ, ಸ್ವಾವಲಂಬಿ, ಸ್ವಉದ್ಯೋಗ, ದುಶ್ಚಟಮುಕ್ತ, ಆದರ್ಶ ಬದುಕಿನ ಮಾದರಿ ಮನೆ ನಮ್ಮದಾಗುವಂತೆ ನೋಡಿಕೊಳ್ಳಬೇಕು. ಸುಸ್ಥಿರ ಜೀವನ ಶೈಲಿ ಅಳವಡಿಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.
*ಸಂವಿಧಾನದ ಉಚಿತ ಪ್ರತಿ
ಸಂವಿಧಾನವೇ ನಮ್ಮ ಶಕ್ತಿಯಾಗಿದ್ದು, ಸಂವಿಧಾನ ಓದುವ ಮೂಲಕ ಸಂತೋಷ, ಸಾಮರಸ್ಯದ ಜೀವನನಡೆಸಬೇಕು. ಇದಕ್ಕಾಗಿ ಮಂಗಳೂರು ವಿವಿ ಸಹಯೋಗದಲ್ಲಿ ಸಂವಿಧಾನದ ಪುಸ್ತಕಗಳನ್ನು ಉಚಿತವಾಗಿ ಹಂಚುವ ಅಭಿಯಾನ ಕೈಗೊಳ್ಳಲಾಗಿದೆ. ಪರಿಸರ ಸಂರಕ್ಷಣೆಗೆ ಸ್ತ್ರೀಶಕ್ತಿ ಜಾಗೃತಿ, ಮತದಾನ ಜಾಗೃತಿ ಹಾಗೂ ಭ್ರಷ್ಟಾಚಾರ ಮುಕ್ತ ಸಮಾಜ ರೂಪಿಸಲು ಉದ್ದೇಶಿಸಲಾಗಿದೆ ಎಂದು ಶೀನ ಶೆಟ್ಟಿ ಅವರು ಹೇಳಿದರು.
* ಜನರ ಬಳಿಗೆ ಫಾರ್ಮುಲಾ:
ಜನಶಿಕ್ಷಣ ಟ್ರಸ್ಟ್‌ನ ನಿರ್ದೇಶಕ ಕೃಷ್ಣ ಮೂಲ್ಯ ಮಾತನಾಡಿ ‘ ಸಾಮಾಜಿಕ ಸಮಸ್ಯೆಗಳ ಪರಿಹಾರಕ್ಕೆ ಜನರ ಬಳಿಗೆ ಹೋಗಿ ಅವರಿಂದಲೇ ಸಮಸ್ಯೆ ನಿವಾರಿಸುವುದು ಅತ್ಯುತ್ತಮ ಫಾರ್ಮುಲಾ. ಜನರ ನೇತೃತ್ವವೇ ಸಾಮಾಜಿಕ ಪರಿಶೋಧನೆ ಆಗಿದ್ದು, ಇದೇ ಪರಿಕಲ್ಪನೆಯಲ್ಲಿ ಜನಶಿಕ್ಷಣ ಟ್ರಸ್ಟ್ 17 ವಿವಿಧ ರೀತಿಯ ಅಭಿಯಾನಗಳನ್ನು ನಡೆಸಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಾತ್ರ 1991ರಿಂದ ನಿರಂತರವಾಗಿ ನವಸಾಕ್ಷರರ ಸಂಘಟನೆ ನಡೆಯುತ್ತಿದೆ. ಅಭಿವೃದ್ಧಿ ಪತ್ರಿಕೋದ್ಯಮ ಮೂಲಕ ಸಮಾಜಮುಖಿ ಕೆಲಸಗಳಲ್ಲಿ ಜನಶಿಕ್ಷಣ ಟ್ರಸ್ಟ್ ತೊಡಗಿಸಿಕೊಂಡಿದೆ ಎಂದರು.
ಹಿರಿಯ ಪತ್ರಕರ್ತ ವಿದ್ಯಾಧರ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿದರು. ಮಂಗಳೂರು ಪ್ರೆಸ್‌ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ ಅಧ್ಯಕ್ಷತೆ ವಹಿಸಿದ್ದರು. ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ , ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ರಾಮಕೃಷ್ಣ.ಆರ್.ಉಪಸ್ಥಿತರಿದ್ದರು. ಪ್ರೆಸ್‌ಕ್ಲಬ್ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ ವಂದಿಸಿದರು. ಹರೀಶ್ ಮೋಟುಕಾನ ಕಾರ್ಯಕ್ರಮ ನಿರೂಪಿಸಿದರು.