ಭಟ್ಕಳ: ಇಲ್ಲಿನ ಹೆಬಳೆ ಗ್ರಾ.ಪಂ. ವ್ಯಾಪ್ತಿಯ ಸುಪ್ರಸಿದ್ಧ ಶೇಡಬರಿ ಜಟಕ ಮಹಾಸತಿ ದೇವಿಯ ಜಾತ್ರೆಗೆ ದೇವಸ್ಥಾನದ ಸುತ್ತಮುತ್ತಲಿನ ಗಡಿ ದೇವರ ಪೂಜೆ ಸಲ್ಲಿಸಿ ವಿದ್ಯುಕ್ತವಾಗಿ ಸೋಮವಾರ ಚಾಲನೆ ನೀಡಲಾಯಿತು.
ಶೇಡಿ ಎಂದರೆ ಮಣ್ಣಿನಿಂದ ಕೂಡಿರುವದು. ಬರಿ ಎಂದರೆ ಇಳಿಜಾರು ಪ್ರದೇಶ. ಈ ಪ್ರದೇಶದಲ್ಲಿ ಪ್ರತಿಷ್ಠಾಪನೆಗೊಂಡ ದೇವಿಗೆ ಶೇಡಬರಿ ಮಹಾಸತಿ ದೇವಿ ಎಂದು ಕರೆಯುತ್ತಾರೆ.
ಜಾತ್ರೆಯ ಆರಂಭದ ಅಂಗವಾಗಿ ಮುಂಜಾನೆಯಿಂದಲೇ ಸಾವಿರಾರು ಸಂಖ್ಯೆಯ ಭಕ್ತಾಧಿಗಳು ಜಟಕ ಮಹಾಸತಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು.
ಮಕ್ಕಳಾಗದವರು, ಕಷ್ಟವನ್ನು ತೀರಿಸುವಂತೆ ಹರಕೆ ಹೊತ್ತ ಭಕ್ತರು ತಮ್ಮ ಇಷ್ಟಾರ್ಥ ನೆರವೇರಿದ ತಕ್ಷಣ ಶೇಡಬರಿ ಮರ ಏರಿ, ಒಂದು ಸುತ್ತು ತಿರುಗಿಸಿ ಹರಕೆಯನ್ನು ಒಪ್ಪಿಸುವುದು ವಾಡಿಕೆ. ಸಾವಿರಾರು ಭಕ್ತರು ಬೆಳಿಗ್ಗೆಯಿಂದಲೇ ತಮ್ಮ ಸೇವೆಯನ್ನು ಅರ್ಪಿಸಿದರು.
ಸುಮಾರು 100 ವರ್ಷಕ್ಕೂ ಹೆಚ್ಚು ಇತಿಹಾಸವಿರುವ ಈ ದೇವಸ್ಥಾನದ ಜಾತ್ರೆ ಅನೇಕ ವಿಶೇಷತೆಗಳಿಂದ ಕೂಡಿದೆ.
ಜಾತ್ರೆಗೆ 7 ದಿನಗಳ ಮುನ್ನವೇ ದೇವಸ್ಥಾನದ ಸುತ್ತಮುತ್ತಲಿನ ನೂರಕ್ಕೂ ಹೆಚ್ಚು ಗಡಿ ದೇವರುಗಳಿಗೆ ಚರು ಹಾಕುವುದರ ಮೂಲಕ ಎಲ್ಲಾ ದೇವರುಗಳಿಗೆ ಸಂತುಷ್ಠಗೊಳಿಸಿ ಜಾತ್ರೆ ಆಂಬಿಸುವುದು ವಾಡಿಕೆ.
ತಾಲೂಕು ಸೇರಿದಂತೆ ಜಿಲ್ಲೆಯ ವಿವಿದಡೆಯಿಂದ ಬೆಳಿಗ್ಗೆಯಿಂದಲೇ ಭಕ್ತರ ಮಹಾಪೂರವೇ ಆಗಮಿಸಿ ಸರತಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಜಾತ್ರೆಯ ಉತ್ಸವವನ್ನು ದೇವಸ್ಥಾನದ ಆಡಳಿತ ಮಂಡಳಿಯ ಸಮಿತಿಯ ನೇತ್ರತ್ವದಲ್ಲಿ ಹಿರಿಯ ಟ್ರಸ್ಟಿಗಳು ಮತ್ತಿತರು ದೇವಸ್ಥಾನದ ಸಲಹಾ ಮಂಡಳಿಯ ನೂರಾರು ಕಾರ್ಯಕರ್ತರು ಜಾತ್ರೆಯ ಮಹೋತ್ಸವವನ್ನು ಯಶಸ್ವಿಯಾಗಿ ನಡೆಸಿಕೊಂಡು ಬಂದಿದ್ದಾರೆ. ಮಂಗಳವಾರವೂ ಸಹ ಶೇಡಬರಿ ಜಾತ್ರೆ ನಡೆಯಲಿದ್ದು ಆ ಪ್ರಯುಕ್ತ ಯಕ್ಷಗಾನ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಆಯೋಜನೆಗೊಂಡಿದೆ.