ಮಂಗಳೂರು: ಬೀದಿ ನಾಯಿಗಳು ಕಂಡೊಡನೆ ಕಲ್ಲೆಸೆದು ಹೊಡೆದೋಡಿಸುವವರೇ ಅಧಿಕ. ಆದರೆ ಮಂಗಳೂರಿನ ಮೇರಿಹಿಲ್ ಹೆಲಿಪ್ಯಾಡ್‌ನಲ್ಲಿ ಅವುಗಳಿಗೆ ಮಳೆಯಿಂದ ರಕ್ಷಿಸಿಕೊಳ್ಳಲು ಹಾಗೂ ಊಟ ಮಾಡಲು ಶೆಡ್ ನಿರ್ಮಿಸಿ, ಮಾನವೀಯತೆ ಮೆರೆದಿದ್ದಾರೆ.
ಇಲ್ಲಿನ ಸಿಸಿಬಿ ಎಎಸ್‌ಐ ಹರೀಶ್ ಪದವಿನಂಗಡಿ, ವಾಣಿಜ್ಯ ತೆರಿಗೆ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕ ನಾಗೇಶ್ ರಾವ್ ಕಲ್ಯಾಣಪುರ, ನಿಸರ್ಗ ಮಂಜುನಾಥ್, ಕಿಶೋರ್, ಸಂತೋಷ್ ಮೊದಲಾದವರ ಸಹಕಾರದಲ್ಲಿ ಸಿಮೆಂಟ್ ಶೀಟ್, ಟರ್ಪಾಲು ಅಳವಡಿಸಿ ಶೆಡ್ ನಿರ್ಮಾಣ ಮಾಡಿದ್ದಾರೆ.
ಹೆಲಿಪ್ಯಾಡ್ ಹಸಿರು ಪರಿಸರದಿಂದ ಕೂಡಿದ್ದು, ಉತ್ತಮ ಗಾಳಿ ಬೀಸುವ ಜಾಗವಾದ ಕಾರಣ ಬೆಳಗ್ಗೆ ಹಾಗೂ ಸಂಜೆಯ ವೇಳೆ ಹಲವು ಮಂದಿ ವಾಯು ವಿಹಾರಕ್ಕೆ ಬರುತ್ತಾರೆ. ವಾಕಿಂಗ್ ಮಾಡುತ್ತಿದ್ದಾಗ ಮಳೆ ಬಂದರೆ ತಕ್ಷಣಕ್ಕೆ ರಕ್ಷಿಸಿಕೊಳ್ಳುವುದಕ್ಕೂ ಈ ಶೆಡ್ ನೆರವಾಗುತ್ತದೆ. ಈ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನಾಯಿ ಮರಿಗಳನ್ನು ತಂದು ಬಿಡುತ್ತಿದ್ದು, ಅವುಗಳಿಗೆ ಇಲ್ಲಿನ ಜೋಗರ್ಸ್ ಪಾರ್ಕ್ ಸದಸ್ಯರು ಊಟ ತಿಂಡಿ ಹಾಕಿ ಸಲಹುತ್ತಿದ್ದಾರೆ.