ಮಡಿಕೇರಿ: ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗ ದಳ ಆಯೋಜಿಸಿದ ಶೌರ್ಯ ಜಾಗರಣಾ ರಥಯಾತ್ರೆಗೆ ಕೊಡಗಿನ ಗಡಿ ಸಂಪಾಜೆಯಲ್ಲಿ ಭಾನುವಾರ ಭವ್ಯ ಸ್ವಾಗತ ಕೋರಿದರು.
ಮಡಿಕೇರಿಯಿಂದ ಆಗಮಿಸಿದ ರಥಯಾತ್ರೆಯನ್ನು ಕೊಯನಾಡು ಶ್ರೀ ಮಹಾಗಣಪತಿ ಗುಡಿಯ ಬಳಿ ಸಂಪಾಜೆ, ಚೆಂಬು ಗ್ರಾಮದ ಹಿಂದೂ ಭಾಂದವರ ಉಪಸ್ಥಿತಿಯಲ್ಲಿ ಅರ್ಚಕರಿಂದ ಆರತಿ ಬೆಳಗಿ ಸ್ವಾಗತಿಸಲಾಯಿತು.
ಬಳಿಕ ಸಂಪಾಜೆ ಪೆಟ್ರೋಲ್ ಬಂಕ್‌ವರೆಗೆ ನೂರಾರು ವಾಹನಗಳ ಜಾಥಾದೊಂದಿಗೆ ಕರೆತರಲಾಯಿತು. ನೆರೆದಿದ್ದ ಹಿಂದೂ ಸಮಾಜದ ಮುಖಂಡರು, ಮಾತೆಯರು, ಹಿಂದೂ ಪರಿವಾರದ ಕಾರ್ಯಕರ್ತರಿಂದ ಭಾರತ ಮಾತೆಗೆ ಪುಷ್ಪಾರ್ಚನೆ ಸಲ್ಲಿಸಲಾಯಿತು.
ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಹಿಂದೂ ನಾಯಕ ಅನಂತ್ ಊರುಬೈಲು ರಥಯಾತ್ರೆಯ ಉದ್ದೇಶ, ಮಹತ್ವದ ಬಗ್ಗೆ ಮಾತನಾಡಿ ಹಿಂದೂ ಸಮಾಜದ ಒಗ್ಗಟ್ಟಿನ ಅನಿವಾರ್ಯತೆ ಬಗ್ಗೆ ವಿವರಿಸಿದರು.
ಸಂಪಾಜೆ ಗೇಟಿನ ತನಕ ಕೇರಳದ ಚಂಡೆನಾದ, ಜಯಘೋಷದೊಂದಿಗೆ ಪಾದಯಾತ್ರೆಯ ಮೂಲಕ ಆಗಮಿಸಿ, ಪಟಾಕಿ ಸಿಡಿಸಿ, ದ.ಕ.ಜಿಲ್ಲೆಗೆ ರಥವನ್ನು ಬೀಳ್ಕೊಡಲಾಯಿತು. ಈ ಸಂದರ್ಭದಲ್ಲಿ ಕೊಡಗು ವಿಹಿಂಪ ಅಧ್ಯಕ್ಷ ಕೃಷ್ಣಮೂರ್ತಿ, ಕಾರ್ಯಾಧ್ಯಕ್ಷ ಸುರೇಶ್ ಮುತ್ತಪ್ಪ, ಮಾಜಿ ಸ್ಪೀಕರ್ ಕೆ.ಜಿ.ಬೋಪಯ್ಯ, ಚಿ.ನಾ ಸೋಮೇಶ್, ವಿಶ್ವ ಹಿಂದೂ ಪರಿಷತ್ ಕಾರ್ಯದರ್ಶಿ ಪುದಿಯಯೊಕ್ಕಡ ರಮೇಶ್, ಉಪಾಧ್ಯಕ್ಷ ಪರಮೇಶ್, ಸಹ ಕಾರ್ಯದರ್ಶಿಗಳಾದ ಸಂತೋಷ್, ಯತೀಶ್ ಪೊನಂಪೇಟೆ ಘಟಕದ ಅಧ್ಯಕ್ಷ ಪಂದ್ಯಂಡ ಹರೀಶ್, ಕಾರ್ಯದರ್ಶಿ ಸುರೇಶ್, ಸುಬ್ರಹ್ಮಣ್ಯ ಉಪಾಧ್ಯಾಯ ಸೇರಿದಂತೆ ಐನೂರಕ್ಕೂ ಮೇಲ್ಪಟ್ಟು ಹಿಂದೂ ಕಾರ್ಯಕರ್ತರು ಭಾಗವಹಿಸಿದ್ದರು.