ಜಿಲ್ಲೆ

ಷಷ್ಠಿ ವೈಭವಕ್ಕೆ ವಿನೂತನ ಮುನ್ನುಡಿ : ವಿವಿಧೆಡೆ ಸ್ವಾಗತ ಕಮಾನು ಮೆರುಗು ಹೆಚ್ಚಿಸಿದ ದೀಪಾಲಂಕೃತ ಕೊಡೆ, ಪ್ರಭಾವಳಿಗಳು

ಸೌಮ್ಯ ಆರ್

ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವಾರ್ಷಿಕ ಚಂಪಾಷಷ್ಠಿ ಜಾತ್ರೋತ್ಸವದ ಅಂಗವಾಗಿ ಶ್ರೀ ಕ್ಷೇತ್ರದಲ್ಲಿ ಅಳವಡಿಸಲ್ಪಟ್ಟ ವಿಶೇಷ ವಿದ್ಯುದ್ದೀಪಾಲಂಕಾರ ಜಾತ್ರೆ ವೈಭವಕ್ಕೆ ವಿನೂತನ ಮುನ್ನುಡಿ ಬರೆಯಿತು. ಭಕ್ತರನ್ನು ವಿಶೇಷವಾದ ವಿದ್ಯುತ್ ಪರಿಕರಗಳಿಂದ ಮಾಡಿದ ಆಕರ್ಷಕ ದೀಪಾಲಂಕೃತ ದ್ವಾರ ಭಕ್ತರನ್ನು ಸ್ವಾಗತಿಸಿತು. ಇದರೊಂದಿಗೆ ದೀಪಾಲಂಕೃತ ಕೊಡೆಗಳು ಮತ್ತು ಪ್ರಭಾವಳಿಗಳು ಜಾತ್ರೆಯ ಮೆರುಗನ್ನು ಹೆಚ್ಚಿಸಿತು.

ವಿದ್ಯುದ್ದೀಪಾಲಂಕಾರ ಕ್ಷೇತ್ರದ ಸೌಂದರ್ಯ ಹೆಚ್ಚಿಸಿತು. ಕಾಶಿಕಟ್ಟೆಯ ಸುತ್ತಲೂ ಅಳವಡಿಸಿ ವಿದ್ಯುತ್ ವ್ಯವಸ್ಥೆ, ಸವಾರಿ ಮಂಟಪದ ಬಳಿಯ ವೃತ್ತದ ಸುತ್ತ ಅಳವಡಿಸಿ ಆಕರ್ಷಕ ಪ್ರಭಾವಳಿ ಮತ್ತು ಆವರಣಕ್ಕೆ ಪೋಣಿಸಿದ ವಿದ್ಯುತ್ ಬಲ್ಪ್‌ಗಳು ಜಾತ್ರೆಯ ಮೆರುಗನ್ನು ಹೆಚ್ಚಿಸಿತು. ಶ್ರೀ ದೇವಳದ ಗೋಪುರ, ಕುಮಾರಧಾರ ದ್ವಾರ, ಬಿಲದ್ವಾರ, ಶ್ರೀ ದೇವಳದ ಪರಿಸರ, ಆದಿಸುಬ್ರಹ್ಮಣ್ಯ, ದೇವಳದ ವಸತಿಗೃಹಗಳು, ಆಡಳಿತ ಕಚೇರಿ ದೀಪಾಲಂಕಾರದಿಂದ ಕಂಗೊಳಿಸಿದೆ. ಈ ಭಾರಿ ವಿಶೇಷವಾಗಿ ವಿದ್ಯುತ್ ಪರಿಕರಗಳಿಂದಲೇ ರಚಿತವಾದ ದ್ವಾರವನ್ನು ಕುಮಾರಧಾರದ ಆರ್‌ಎನ್‌ಎಸ್ ಬಳಿ ನಿರ್ಮಿಸಲಾಗಿತ್ತು. ಇದು ಭಕ್ತರನ್ನು ವಿಶೇಷವಾಗಿ ಆಕರ್ಷಿಸಿತು.

ದೀಪಾಲಂಕೃತ ಕೊಡೆಗಳು: ಈ ಭಾರಿ ವಿಶೇಷವಾಗಿ ರಥಬೀದಿಯ ಇಕ್ಕೆಲದಲ್ಲಿ ವಿದ್ಯುತ್ ದೀಪಾಲಂಕೃತ ಕೊಡೆಗಳನ್ನು ಅಳವಡಿಸಲಾಗಿದೆ. ಅಲ್ಲದೆ ಗೋಪುರದ ಬಳಿಯಿಂದ ಆದಿಸುಬ್ರಹ್ಮಣ್ಯ ಹೋಗುವ ರಸ್ತೆಯ ಇಕ್ಕೆಲದಲ್ಲಿ ವೃಕ್ಷದ ಕೊಂಬೆ ಮಾದರಿಯ ವಿದ್ಯುತ್‌ದೀಪ ರಚನೆ ಅಳವಡಿಸಲಾಗಿದೆ.

ಸ್ವಾಗತ ಕಮಾನುಗಳು: ಜಾತ್ರೋತ್ಸವಕ್ಕೆ ಭಕ್ತರನ್ನು ಸ್ವಾಗತಿಸಲು ವಿಶೇಷ ಸ್ವಾಗತ ಕಮಾನುಗಳು ಸಿದ್ಧಗೊಂಡಿದೆ. ಗುಂಡ್ಯದಲ್ಲಿ ಭಕ್ತ ರಾದ ಸಂತೋಷ್ ಗುಂಡ್ಯ, ಪಂಜದಲ್ಲಿ ಮಹೇಶ್ ಕುಮಾರ್ ಕರಿಕ್ಕಳ, ಡಾ.ದೇವಿಪ್ರಸಾದ್ ಕಾನತ್ತೂರು, ರಜತ್ ಭಟ್ ಪಂಜದ ಬೈಲು ಅವರ ಸೇವೆಯಲ್ಲಿ ಸ್ವಾಗತ ಕಮಾನು ಸಿದ್ಧಗೊಂಡಿದೆ. ಇದಲ್ಲದೆ ಕಡಬ, ಗುತ್ತಿಗಾರು, ಪೈಚಾರು, ದರ್ಬೆಯಲ್ಲಿ ಸ್ವಾಗತ ಕಮಾನು ನಿರ್ಮಿಸಲು ಯೋಚಿಸಲಾಗಿದೆ.