ಜಿಲ್ಲೆ

ಬೆನ್ನು ಹತ್ತಿದರೆ ಬಿಡೋದಿಲ್ಲ, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಸಚಿವೆ ಶಶಿಕಲಾ ಜೊಲ್ಲೆ

Kolar

ಕೋಲಾರ: ಜಿಲ್ಲೆಗೆ ಮೊದಲ ಬಾರಿ ಭೇಟಿ ನೀಡಿದ್ದೇನೆ, ಸಮಾಧಾನದಿಂದ ಇದ್ದೇನೆ, ಸುಮ್ಮನೆ ನನಗೆ ಸಿಟ್ಟು ತರಿಸಬೇಡಿ, ಬೆನ್ನು ಹತ್ತಿದರೆ ಬಿಡೋದಿಲ್ಲ, ಕೇಂದ್ರ ಸರ್ಕಾರದ ಪೋಷಣಾ ಅಭಿಯಾನದಡಿ ನಡೆಸಿದ ಕಾರ್ಯಕ್ರಮಕ್ಕೆ ಸೂಕ್ತ ಪ್ರಚಾರ ನೀಡದೆ ಸುಳ್ಳು ಮಾಹಿತಿ ನೀಡಬೇಡಿ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಜಿಪಂ ಸಭಾಂಗಣದಲ್ಲಿ ಶುಕ್ರವಾರ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ, ಜಿಲ್ಲೆಯಲ್ಲಿ ಪೋಷಣಾ ಅಭಿಯಾನದಡಿ ಗರ್ಭಿಣಿಯರಿಗೆ ಸೀಮಂತ, ಮಕ್ಕಳಿಗೆ ಅನ್ನಪ್ರಾಶನ ಇನ್ನಿತರ ಕಾರ್ಯಕ್ರಮಗಳು, ತರಬೇತಿ, ಸಮುದಾಯ ಆಧಾರಿತ ಚಟುವಟಿಕೆಯಡಿ 12,366 ಕಾರ್ಯಕ್ರಮ ನಡೆಸಲಾಗಿದೆ ಎಂದು ಉಪ ನಿರ್ದೆಶಕಿ ಎಂ.ಜಿ ಪಾಲಿ ಮಾಹಿತಿ ನೀಡಿದಾಗ ಕಾರ್ಯಕ್ರಮ ನಡೆಸಿರುವ ಬಗ್ಗೆ ಜನರಿಗೆ ಮಾಹಿತಿ ಇಲ್ಲ ಎಂದು ಸಂಸದ ಎಸ್.ಮುನಿಸ್ವಾಮಿ, ಜಿಲ್ಲಾ ಉಸ್ತುವಾರಿ ಸಚಿವ ಎಚ್. ನಾಗೇಶ್ ಅಪಸ್ವರ ಎತ್ತಿದರು.

ಕಾರ್ಯಕ್ರಮಗಳಿಗೆ ಪ್ರಚಾರ ನೀಡದಿರುವ ಬಗ್ಗೆ ಸಚಿವೆ ಅಸಮಾಧಾನ ವ್ಯಕ್ತಪಡಿಸಿ ಇಲ್ಲಿರುವ ಜನಪ್ರತಿನಿಧಿಗಳಿಗೆ ಯಾರಿಗೂ ಮಾಹಿತಿ ಇಲ್ಲ, ಏನೇನು ಮಾಡಿದ್ದೀರಿ ಎಂದು ಸಿಡಿಪಿಒ ಅವರನ್ನು ಪ್ರಶ್ನಿಸಿದರು.

ಮುಳಬಾಗಿಲಿನ ಕುರುಡುಮಲೆಯಲ್ಲಿ, ಕೋಲಾರದ ರಂಗಮಂದಿರದಲ್ಲಿ ಸಂಸದರ ಸಮ್ಮುಖದಲ್ಲಿ ಸೀಮಂತ ಕಾರ್ಯಕ್ರಮ ನಡೆಸಿರುವ ಬಗ್ಗೆ ಮಾಹಿತಿ ನೀಡಿದರಾದರೂ ಬೇರೆ ಯಾವುದೇ ಸಿಡಿಪಿಒಗಳು ಮಾಹಿತಿ ನೀಡಲಿಲ್ಲ ಇದರಿಂದ ಸಿಡಿಮಿಡಿಗೊಂಡ ಜೊಲ್ಲೆ, ಫಲಾನುಭವಿಗಳಿಗೆ ಪ್ರಯೋಜನ ಸಿಕ್ಕಿದೆ ಎಂದು ಜನರಿಗೆ ತಿಳಿಯಬೇಕು, ಕಾರ್ಯಕ್ರಮ ಸಣ್ಣದಿರಲಿ, ದೊಡ್ಡದಿರಲಿ ಜನಪ್ರತಿನಿಧಿಗಳನ್ನು ಆಹ್ವಾನಿಸಬೇಕು, ಕಾರ್ಯಕ್ರಮ ಮಾಡಿದ್ದರೆ ಹೇಳ್ತಿದ್ರಿ, ಸುಳ್ಳು ವರದಿ ಯಾಕೆ ನೀಡುತ್ತೀರಿ ಎಂದು ತರಾಟೆಗೆ ತೆಗೆದುಕೊಂಡರು.

ಸ್ವಧಾರಾ ಇನ್ನಿತರ ಯೋಜನೆಯಡಿ ಸ್ತ್ರೀಶಕ್ತಿ ಗುಂಪುಗಳಿಗೆ ಹೊಸತನದ ತರಬೇತಿ ನೀಡಿ, ಇಲಾಖೆಯಿಂದ ಬೆಂಬಲ ನೀಡುತ್ತೇವೆ ಎಂದರು.

ಸಂಸದ ಎಸ್. ಮುನಿಸ್ವಾಮಿ ಮಾತನಾಡಿ, ಕಾರ್ಯಕ್ರಮ ಏನೇ ಇರಲಿ, ನಮಗೂ ತಿಳಿಸಿ, ಬರುತ್ತೇವೆ, ಪೌಷ್ಟಿಕ ಆಹಾರ ಸರಬರಾಜು ಗುತ್ತಿಗೆಯನ್ನು 7 ವರ್ಷಗಳಿಂದ ಒಂದೇ ಸಂಸ್ಥೆಗೆ ವಹಿಸಿದ್ದನ್ನು ಬದಲಿಸಬೇಕು, ಕೋರ್ಟ್ ಮೆಟ್ಟಿಲೇರಿದ್ದರೆ ತೆರವಿಗೆ ಪೂರಕ ದಾಖಲೆ ಸಲ್ಲಿಸಲು ಇಲಾಖೆಯಿಂದ ಕ್ರಮವಹಿಸಿ ಎಂದಾಗ ಸಚಿವೆ ಧ್ವನಿಗೂಡಿಸಿದರು.

ಜಿಲ್ಲಾಧಿಕಾರಿ ಸಿ. ಸತ್ಯಭಾಮ ಮಾತನಾಡಿ, ಶಿಫಾರಸು ಇಲ್ಲದೆ ಆ್ಯಸಿಡ್ ಮಾರಾಟ ಮಾಡುವುದಕ್ಕೆ ಕಡಿವಾಣ ಹಾಕುವಂತೆ ಸಚಿವೆಯನ್ನು ಕೋರಿದರಲ್ಲದೆ ವಿವಿಧ ಯೋಜನೆ ಒಗ್ಗೂಡಿಸಿ ಉಪಯುಕ್ತ ಕಾರ್ಯಕ್ರಮ ರೂಪಿಸುವಂತೆ ಮನವಿ ಮಾಡಿದರು.

ಜಿಲ್ಲಾ ಉಸ್ತುವಾರಿ ಸಚಿವ ಎಚ್. ನಾಗೇಶ್, ಜಿಪಂ ಅಧ್ಯಕ್ಷ ಸಿ.ಎಸ್. ವೆಂಕಟೇಶ್, ಉಪಾಧ್ಯಕ್ಷೆ ಯಶೋದಾ ಕೃಷ್ಣಮೂರ್ತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಂಟಿ ನಿರ್ದೇಶಕಿ ಸುರೇಖಾ ವಿಜಯಪ್ರಕಾಶ್, ಜಿಪಂ ಉಪಕಾರ್ಯದರ್ಶಿ ಸಂಜೀವಪ್ಪ ಹಾಜರಿದ್ದರು.

30 ಲಕ್ಷ ವಿಮಾ ಸೌಲಭ್ಯಕ್ಕೆ ಸಿಎಂ ಸಮ್ಮತಿ: ಕೋಲಾರ: ಕರೊನಾ ಸಂದರ್ಭದಲ್ಲಿ ಆಶಾ ಕಾರ್ಯಕರ್ತೆಯರ ಜತೆಗೂಡಿ ಕೆಲಸ ಮಾಡುತ್ತಿರುವ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೂ 30 ಲಕ್ಷ ರೂ.ಗಳ ವಿಮಾ ಸೌಲಭ್ಯ ಕಲ್ಪಿಸಲು ಸಿಎಂ ಬಿ.ಎಸ್.ಯಡಿಯೂರಪ್ಪ ಸಮ್ಮತಿಸಿದ್ದಾರೆ. ಆರೋಗ್ಯ ಇಲಾಖೆಯಡಿ ಕಾರ್ಯನಿರ್ವಹಿಸುವ ಆಶಾ ಕಾರ್ಯಕರ್ತೆಯರಿಗೆ 50 ಲಕ್ಷ ರೂ. ವಿಮಾ ಸೌಲಭ್ಯವಿದೆ. ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಸೌಲಭ್ಯ ಕಲ್ಪಿಸುವಂತೆ ಮುಖ್ಯಮಂತ್ರಿಗಳನ್ನು ಮನವಿ ಮಾಡಿದ್ದು ಸ್ಪಂದಿಸಿದ್ದಾರೆ ಎಂದು ಶಶಿಕಲಾ ಜೊಲ್ಲೆ ತಿಳಿಸಿದರು.

ಅರಿವು ಮೂಡಿಸಿ: ಪೋಷಣ್ ಅಭಿಯಾನದಡಿ ಮೊದಲ ಹಂತದಲ್ಲಿ ಅರಿವು ಮೂಡಿಸುವುದು, ಸೀಮಂತ, ಅನ್ನಪ್ರಾಶನ ಕಾರ್ಯಕ್ರಮ ನಡೆಯುತ್ತಿದೆ. ಎರಡನೇ ಹಂತದಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ಮೊಬೈಲ್ ನೀಡಲಾಗುತ್ತಿದ್ದು, ಮಕ್ಕಳ ಬೆಳವಣಿಗೆ ಗುರುತಿಸಿ ಮಾಹಿತಿ ದಾಖಲಿಸುವುದು ಸೇರಿ ಸೋರಿಕೆ ತಡೆಗಟ್ಟುವ ಎಲ್ಲ ಕ್ರಮಗಳನ್ನು ಆ್ಯಪ್ ಒಳಗೊಂಡಿರುತ್ತದೆ ಎಂದು ಜೊಲ್ಲೆ ತಿಳಿಸಿದರು.