ಮಡಿಕೇರಿ:
ಕೊಡಗಿನಲ್ಲಿ ವಾಡಿಕೆಯ ಮಳೆ ಆಗುತ್ತಿಲ್ಲ. ಹಾಗಾಗಿ ಕಾವೇರಿ ಕಣಿವೆಯ ಪ್ರಮುಖ ಜಲಾಶಯಗಳಲ್ಲಿ ಒಂದಾಗಿರುವ ಹಾರಂಗಿ ಬರಿದಾಗಿದೆ. ಹೀಗೆ ಬರಿದಾಗಿರುವ ಜಲಾಶಯದ ಒಡಲಿನಿಂದ ಈಗ ಇತಿಹಾಸದ ಸಾಕ್ಷ್ಯಗಳು ಒಂದೊಂದಾಗಿ ಹೊರಬರುತ್ತಿವೆ. ಇತ್ತೀಚೆಗಷ್ಟೇ ಇಲ್ಲಿ ನಿಲಸುಗಲ್ಲು ಸಮಾಧಿ ಸಂಶೋಧಿಸಿದ್ದ ಇತಿಹಾಸಕಾರರು ಈಗ ತುರುಗೋಳ್ (ಗೋವಿನ ಕರುವಿನ ರಕ್ಷಣೆ)ಶಾಸನ ಇರುವ ವೀರಗಲ್ಲು, ವೀರ ಮಾಸ್ತಿ ಗಲ್ಲು ಹಾಗೂ ಗಂಗ, ಹೊಯ್ಸಳ, ವಿಜಯನಗರ ಕಾಲದ ಏಕಕೂಟ ಶೈವ ದೇವಾಲಯವನ್ನೂ ಪತ್ತೆ ಹಚ್ಚಿದ್ದಾರೆ. ಈ ಮೂಲಕ ಹಾರಂಗಿ ಹಿನ್ನೀರು ಪ್ರದೇಶದಲ್ಲಿನ ಐತಿಹಾಸಿಕ ಮಹತ್ವದ ಸಂಗತಿಗಳಿಗೆ ಬೆಳಕು ಚೆಲ್ಲುವ ಕೆಲಸ ಮಾಡಿದ್ದಾರೆ.
ದೊಡ್ಡದಾದ ಹೇರೂರು ಬೆಟ್ಟ, ದಟ್ಟ ಕಾಡು, ಪ್ರಶಾಂತವಾಗಿ ಹರಿಯುವ ಕಾವೇರಿಯ ಉಪನದಿ ಹಾರಂಗಿ…ಒಂದು ನಾಗರಿಕತೆ ಬದುಕಿ ಬಾಳಲು ಇದಕ್ಕಿಂತ ಇನ್ನೇನು ಬೇಕು ? ಈ ಪ್ರದೇಶ ಬೃಹತ್ ಸಂಸ್ಕೃತಿಯ ಜನಾಂಗದ ನೆಲೆಯಾಗಿತ್ತು ಎನ್ನುವುದನ್ನು ಈಗಾಗಲೇ ಇತಿಹಾಸಕಾರರು ಪತ್ತೆಹಚ್ಚಿದ್ದಾರೆ. ಕಪ್ಪು ಮಣ್ಣಿನಿಂದ ಕೂಡಿದ, ವ್ಯವಸಾಯಕ್ಕೆ ಹಾಗೂ ಮಡಿಕೆ ತಯಾರಿಕೆಗೆ ಯೋಗ್ಯವಾದ ಪ್ರದೇಶ ಇದಾಗಿದ್ದು, ನೀರಿನ ಸೌಲಭ್ಯವೂ ಸಿಗುವುದರಿಂದ ಇಲ್ಲಿ ನಾಗರಿಕತೆ ಬೆಳೆದು ಬಂದಿತ್ತು ಎನ್ನುತ್ತಾರೆ ಸಂಶೋಧಕರು.
ಹಾರಂಗಿ ಜಲಾಶಯ ಕಟ್ಟಿದ ನಂತರ ಐತಿಹಾಸಿಕ ಮಹತ್ವವಿರುವ ಅಪರೂಪದ ಶಾಸನಗಳು, ಸಮಾಧಿಗಳು, ದೇವಾಲಯಗಳು ಹಿನ್ನೀರಿನಲ್ಲಿ ಮುಳುಗಿ ಹೋಗಿದ್ದವು. ಬೇಸಿಗೆಯಲ್ಲಿ ನೀರಿನ ಮಟ್ಟ ಇಳಿದಾಗ ಸ್ಥಳೀಯರು ಇವುಗಳನ್ನು ಗಮನಿಸುತ್ತಿದ್ದರಾದರೂ ಅವುಗಳ ಚಾರಿತ್ರಿಕ ಮಹತ್ವದ ಅರಿವು ಇಲ್ಲದ ಕಾರಣ ನಿರ್ಲಕ್ಷ್ಯಕ್ಕೆ ಒಳಗಾಗಿತ್ತು. ಸಾಕಷ್ಟು ಶಾಸನಗಳು, ಸಮಾಧಿಗಳು ಈಗಾಗಲೇ ಜೀರ್ಣಾವಸ್ಥೆ ತಲುಪಿವೆ. ಇದೀಗ ಮತ್ತೆ ಜಲಾಶಯದಲ್ಲಿ ನೀರಿನ ಮಟ್ಟ ಕುಸಿದಿದ್ದು, ಹಿನ್ನೀರು ಪ್ರದೇಶದಲ್ಲಿನ ಐತಿಹಾಸಿಕ ಸಾಕ್ಷ್ಯಗಳು ಮತ್ತೆ ತಮ್ಮ ಇರುವಿಕೆಯನ್ನು ತೋರಿಸುತ್ತಿವೆ. ಇಂತಹ ಜಾಗದಲ್ಲಿ ಈಗ ಚಿಕ್ಕ ಅಳುವಾರದಲ್ಲಿರುವ ಕೊಡಗು ವಿಶ್ವವಿದ್ಯಾಲಯ ಇತಿಹಾಸ ವಿಭಾಗದ ಉಪನ್ಯಾಸಕ ಡಾ. ಅರುಣ್ ಕುಮಾರ್ ಹೆಚ್.ಆರ್. ನೇತೃತ್ವದಲ್ಲಿ ಬಿರುಸಿನ ಸಂಶೋಧನೆ ನಡೆದಿದೆ.
ಇತ್ತೀಚೆಗಷ್ಟೇ ನಿಲಸುಗಲ್ಲು ಸಮಾಧಿ ಸಂಶೋಧಿಸಿದ್ದ ಡಾ. ಅರುಣ್ ಕುಮಾರ್ ಹೆಚ್.ಆರ್. ಮತ್ತು ತಂಡ ಇದೀಗ ಕ್ರಿ.ಶ. ೧೦ ಮತ್ತು ೧೧ನೇ ಶತಮಾನದ ಹೊಯ್ಸಳ ಕಾಲದ ತುರುಗೋಳ್ (ಗೋವಿನ ಕರುವಿನ ರಕ್ಷಣೆ) ಶಾಸನ ಇರುವ ವೀರಗಲ್ಲು, ವೀರ ಮಾಸ್ತಿ ಗಲ್ಲು ಹಾಗೂ ಗಂಗ, ಹೊಯ್ಸಳ ವಿಜಯನಗರದ ಕಾಲದ ಏಕಕೂಟ ಶೈವ ದೇವಾಲಯವನ್ನು ಕುಶಾಲನಗರ ತಾಲೂಕು ಹೇರೂರಿನ ಹಾರಂಗಿ ಹಿನ್ನೀರಿನಲ್ಲಿ ಪತ್ತೆ ಹಚ್ಚಿದ್ದಾರೆ. ಶಾಸನವಿರುವ ತುರುಗೋಳ್ ಅಂದರೆ ಗೋವಿನ ಕರುವಿನ ರಕ್ಷಣೆಯ ವೀರಗಲ್ಲನ್ನು ಪಶ್ಚಿಮಾಭಿಮುಖವಾಗಿ ನಿಲ್ಲಿಸಲಾಗಿದೆ. ಪಕ್ಕದಲ್ಲೇ ವೀರ ಮಾಸ್ತಿಗಲ್ಲು ಇದೆ.
ಬಿಳಿ ಗ್ರಾನೈಟ್ ಕಲ್ಲಿನಿಂದ ಮಾಡಿರುವ ಈ ಶಾಸನ ೪ ಅಡಿ ಎತ್ತರ, ೪ ಅಡಿ ಅಗಲವಿದ್ದು, ಬಲಭಾಗದಲ್ಲಿ ೨೦ ಸಾಲುಗಳಿಂದ ಮತ್ತು ಎಡಭಾಗದಲ್ಲಿ ೧೩ ಸಾಲುಗಳಿಂದ ಹಳೆಯ ಕನ್ನಡ ಪದಗಳನ್ನು ಹೊಂದಿದೆ. ಈ ಶಾಸನದ ಅಕ್ಷರಗಳು ಹಾಳಾಗಿದ್ದು ಇದರಲ್ಲಿ ’ಹೆರುರ’ (ಹೇರೂರು ಗ್ರಾಮ) ’ಎತ್ತಿ’ ’ಕಟ್ಟಿ’ ಮತ್ತಿತರ ವಿಷಯಗಳಿಂದ ಕೂಡಿದೆ ಎಂದು ಶಾಸನ ಓದಿದ ಮೈಸೂರು ಅಂಡ್ ಕೂರ್ಗ್ ಫ್ರಮ್ ಇನ್ಸ್ಕ್ರಿಪ್ಸನ್‌ನ ಡಾ. ಭೈರವ ತಿಳಿಸಿರುವುದಾಗಿ ಡಾ. ಅರುಣ್ ಕುಮಾರ್ ಹೆಚ್.ಆರ್. ಮಾಹಿತಿ ನೀಡಿದ್ದಾರೆ. ಈ ಕಲ್ಲು ಕೇಳಭಾಗದಲ್ಲಿ ಮುರಿದಿದೆ
ಈ ಶಾಸನವಿರುವ ವೀರಗಲ್ಲು ಮೂರು ಪಟ್ಟಿಗಳಿಂದ ಕೂಡಿದ್ದು, ಮೊದಲನೆಯ ಪಟ್ಟಿಯಲ್ಲಿ ಗೋವಿನ ಕರುವಿನ ರಕ್ಷಣೆಗೆ ವೀರ, ಬಲಭಾಗ ಮತ್ತು ಎಡಭಾಗದಲ್ಲಿರುವ ಕುದುರೆ ಮೇಲೆ ಬಂದ ಶತ್ರು ವಿರುದ್ಧ ಬಲಗೈಯಲ್ಲಿ ಬಿಲ್ಲು, ಎಡಗೈಯಲ್ಲಿ ಬಾಣ ಹಿಡಿದು ಹೋರಾಟ ಮಾಡುತ್ತಿರುವ ದೃಶ್ಯ ಕಂಡು ಬರುತ್ತದೆ. ಎರಡನೇ ಪಟ್ಟಿಗೆಯಲ್ಲಿ ಶತ್ರು ವಿರುದ್ಧ ಹೋರಾಟ ಮಾಡಿ ವೀರಮರಣ ಹೊಂದಿದ ಮೇಲೆ ಸ್ವರ್ಗಲೋಕದ ಅಪ್ಸರೆಯರು ಸ್ವರ್ಗಲೋಕಕ್ಕೆ ಕರೆದೊಯ್ಯುವ ದೃಶ್ಯವಿದೆ. ಮೂರನೇ ಪಟ್ಟಿಯಲ್ಲಿ ಸ್ವರ್ಗಲೋಕದಲ್ಲಿ ಶಿವಲಿಂಗದ ಮುಂದೆ ಧ್ಯಾನಾಕ್ತನಾಗಿ ಕುಳಿತಿರುವ ವೀರ, ಎಡಬಾಗ ಮತ್ತು ಬಲಭಾಗ ಅಪ್ಸರೆಯರನ್ನು ಕಾಣಬಹುದಾಗಿದೆ.
ಶಾಸನದ ಮೇಲ್ಭಾಗದಲ್ಲಿ ಸೂರ್ಯ ಮತ್ತು ಚಂದ್ರರ ಚಿಹ್ನೆಗಳಿದ್ದು ಈ ವೀರ ಅಜರಾಮರ ಎಂಬುದನ್ನು ತೋರಿಸುತ್ತದೆ. ಪಕ್ಕದಲ್ಲಿ ಈ ವೀರನ ಹೆಂಡತಿ ಸತಿ ಸಹಗಮನವಾಗುತ್ತಿರುವ ವೀರಮಾಸ್ತಿ ಗಲ್ಲು ಇದೆ. ಮುಂದೆ ಅನೇಕ ಬಲಿಪೀಠಗಳು ಕಂಡುಬರುತ್ತವೆ. ಮತ್ತು ಒಂದು ಕಿಲೋಮೀಟರ್ ದೂರದಲ್ಲಿ ಬಿಳಿ ಗ್ರಾನೈಟ್ ಶಿಲೆಯಿಂದ ಗಂಗ, ಹೊಯ್ಸಳ, ವಿಜಯನಗರ ಕಾಲದ ಏಕಕೂಟ ಶೈವ ದೇವಾಲಯ ಕಂಡು ಬರುತ್ತದೆ ಇದು ಮಳೆಗಾಲದಲ್ಲಿ ಸಂಪೂರ್ಣವಾಗಿ ಮುಳುಗಿದ್ದು ಬೇಸಿಗೆಯಲ್ಲಿ ಕಾಣುತ್ತದೆ. ಇದರಲ್ಲಿ ಯಾವುದೇ ಲಿಪಿಗಳು ಕಾಣಿಸುವುದಿಲ್ಲ. ಗರ್ಭಗೃಹದಲ್ಲಿ ಶಿವಲಿಂಗ ಹಾಳಾಗಿದ್ದು, ಪಾಣಿಪೀಠ ಮಾತ್ರ ಇದೆ.
ಮೇಲ್ಭಾಗ ಭುವನೇಶ್ವರಿ ಪದ್ಮದಳದಿಂದ ಕೂಡಿದೆ. ನವರಂಗ ಎರಡು ಕಂಬಗಳನ್ನು ಹೊಂದಿದ್ದು, ದ್ವಾರದ ಬಾಗಿಲಿನಲ್ಲಿ ಗಜಲಕ್ಷ್ಮೀಯ ಕೆತ್ತನೆ ಇದೆ. ಬಲ ಭಾಗ ಮತ್ತು ಎಡಭಾಗ ಮದನಿಕೆ ವಿಗ್ರಹಗಳು ಕಂಡುಬರುತ್ತದೆ. ಜತೆಗೆ ಗಣಪತಿ ಶಿಲ್ಪವಿದೆ. ಇದು ಸಂಪೂರ್ಣವಾಗಿ ಹಾಳಾಗಿದ್ದು, ಗೋಡೆಗಳ ಮೇಲೆ ಬೇರೆ ಯಾವುದೇ ತರಹದ ಶಿಲ್ಪಗಳು ಕಂಡುಬರುವುದಿಲ್ಲ.
ತುರುಗೋಳ್ ವೀರಗಲ್ಲು ಕಂಡುಬರುವುದು ಬಹಳ ಅಪರೂಪ ಎನ್ನುತ್ತಾರೆ ಇತಿಹಾಸಕಾರರು. ಸಾಮಾನ್ಯವಾಗಿ ಅರಣ್ಯ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಗೋವುಗಳನ್ನು ಸಾಕಲಾಗುತ್ತಿತ್ತು. ಹೇರೂರು ಪ್ರದೇಶವೂ ಅರಣ್ಯವಾಗಿದ್ದ ಕಾರಣ ಮೊದಲು ಇಲ್ಲಿ ಗೋವುಗಳ ಸಾಕಾಣಿಕೆ ಹೆಚ್ಚಿನ ಪ್ರಮಾಣದಲ್ಲಿ ನಡೆಯುತ್ತಿದ್ದಿರಬಹುದು. ತುರುಗೋಳ್ ವೀರಗಲ್ಲಿನ ವಿಶೇಷ ಎಂದರೆ ಗೋವುಗಳಿಂದ ಹೆಚ್ಚಿನ ಆರ್ಥಿಕ ಲಾಭ, ಇವುಗಳಿಂದಲೇ ರಾಜ್ಯದ ಅಭಿವೃದ್ಧಿ ಮತ್ತು ಸಂಪತ್ತು ಎಂದು ನಂಬಿ ಇವರು ಆಡಳಿತ ಮಾಡುವ ರಾಜ್ಯದಲ್ಲಿ ದೇವಾಲಯದ ಮುಂಭಾಗ ನಂದಿಯ ವಿಗ್ರಹ ಕೆತ್ತನೆ ಮಾಡುತ್ತಿದ್ದರು ಮತ್ತು ಆರಾಧಿಸುತ್ತಿದ್ದರು.
ಕೊಡಗಿನಲ್ಲಿ ಅಪರೂಪ ಆಗಿರುವ ತುರುಗೋಳ್ ವೀರಗಲ್ಲು ಚಿಕ್ಕಮಗಳೂರು ಭಾಗದಲ್ಲಿ ದೊರೆತಿದೆ. ಈ ಕ್ಷೇತ್ರ ಕಾರ್ಯದಲ್ಲಿ ಡಾ. ಅರುಣ್ ಕುಮಾರ್ ಹೆಚ್.ಆರ್. ಜತೆ ನಾಕೂರು ಶಿರಂಗಾಲ ಗ್ರಾ.ಪಂ. ಅಧ್ಯಕ್ಷ ಜಗನ್ನಾಥ್, ಹೇರೂರು ಗ್ರಾಮದ ಮುಖಂಡ ಗಗನ್ ಗೌಡ ಮುಂಡೋಡಿ, ದಿಲನ್, ಶಿವು, ದಾಸ್ ಹಾಗು ರವಿ ಸಹಕರಿಸಿದ್ದರು.
ಕೊಡಗಿನಲ್ಲಿನ ಶಾಸನಗಳಿಗೆ ಸಂಬಂಧಪಟ್ಟಂತೆ ಇತಿಹಾಸಕಾರ ಬಿ. ಎಲ್. ರೈಸ್ ಎಪಿಗ್ರಪಿಯ ಕರ್ನಾಟಿಕಾ, ಮೈಸೂರು ಅಂಡ್ ಪೂರ್ ಫ್ರಮ್ ಇನ್ಸ್ಕ್ರಿಪ್ಷನ್‌ನಲ್ಲಿ ಪ್ರಸ್ತಾಪಿಸಿದ್ದಾರೆ. ಕರ್ನಾಟಕದಲ್ಲಿ ಸುಮಾರು ೯೦೦೦ ಶಾಸನಗಳನ್ನ ಪರಿಚಯಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಕೊಡಗಿನಲ್ಲೂ ಅವರು ಸಾಕಷ್ಟು ಸಂಶೋಧನೆಗಳನ್ನು ಮಾಡಿದ್ದಾರೆ. ಈಗ ನಮ್ಮ ತಂಡ ಕೂಡ ಹಾರಂಗಿ ಹಿನ್ನೀರಿನಲ್ಲಿ ಸಂಶೋಧನೆಗಳನ್ನು ನಡೆಸುತ್ತಿದ್ದು, ಐತಿಹಾಸಿಕ ಮಹತ್ವದ ಸಾಕ್ಷ್ಯಗಳು ಲಭ್ಯವಾಗಿದೆ. ಒಂದಕ್ಕಿಂತ ಒಂದು ಕುತೂಹಲಕಾರಿಯಾಗಿದ್ದು, ಕೊಡಗಿನಲ್ಲಿನ ನಾಗರಿಕತೆ ಬೆಳವಣಿಗೆ ಅಂಶಗಳ ಮೇಲೆ ಬೆಳಕು ಚೆಲ್ಲುವಂತಿದೆ.
ಡಾ. ಅರುಣ್ ಕುಮಾರ್ ಹೆಚ್.ಆರ್., ಉಪನ್ಯಾಸಕ, ಇತಿಹಾಸ ವಿಭಾಗ, ಕೊಡಗು ವಿಶ್ವವಿದ್ಯಾಲಯ