ಜಿಲ್ಲೆ

ಶರೀಫರ ತತ್ವಪದಗಳು ಇಂದಿಗೂ ಪ್ರಸ್ತುತ

Dharwada - Vikram Nadiger

ವಿಜಯವಾಣಿ ಸುದ್ದಿಜಾಲ ಧಾರವಾಡ
ತತ್ವಪದಗಳು ಎಂದಿಗೂ ಪ್ರಸ್ತುತವಾಗಿದ್ದು, ತತ್ವಪದಗಳು ಅಪ್ರಸ್ತುತ ಎನಿಸಿದರೆ ಬಲ್ಲವರಿಂದ ಅರ್ಥ ಮಾಡಿಕೊಳ್ಳುವುದು ಸೂಕ್ತ ಎಂದು ನಿವೃತ್ತ ಪ್ರಾಚಾರ್ಯ ಡಾ. ಸಿ.ಕೆ. ನಾವಲಗಿ ಹೇಳಿದರು.
ಸಂತ ಶಿಶುನಾಳ ಶರೀಫರ ಜಯಂತಿ ನಿಮಿತ್ತ ನಗರದ ಜಾನಪದ ಸಂಶೋಧನಾ ಕೇಂದ್ರವು ಕರ್ನಾಟಕ ವಿದ್ಯಾವರ್ಧಕ ಸಂಘದ ರಾ.ಹ. ದೇಶಪಾಂಡೆ ಭವನದಲ್ಲಿ ಮಂಗಳವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ತತ್ವಪದ ಪ್ರಸ್ತುತತೆ ಕುರಿತು ಉಪನ್ಯಾಸ ನೀಡಿದರು.
ತತ್ವಪದಗಳು ಸದಾ ಪ್ರಸ್ತುತವಾಗಿರುತ್ತವೆ. ಶರಣರು ದಾರ್ಶನಿಕರು ಜೀವನದ ಸಂದೇಶ, ಮೌಲ್ಯ, ಸದ್ವಿಚಾರಗಳನ್ನು ಹಾಡಿನ ಮೂಲಕ ಹೇಳಿದ್ದು, ಅವೇ ತತ್ವಪದಗಳಾಗಿ ಪ್ರಸಿದ್ಧಿ ಪಡೆದವು. ಮುಸಲ್ಮಾನ ಹಾಗೂ ಹಿಂದೂಗಳ ಮಧ್ಯೆ ಕೊಂಡಿಯಂತಿದ್ದ ಸಂತ ಶಿಶುನಾಳ ಶರೀಫರು ಸಾವಿರಾರು ತತ್ವಪದ ರಚನೆ ಮಾಡಿದ್ದಾರೆ. ಅವರನ್ನು ದಾರ್ಶನಿಕ ಸಂತ ಎಂದು ಕರೆಯಬಹುದಾಗಿದ್ದು, ಅವರು ಮಾಡಿದ ಕಾರ್ಯ, ಅವರ ತತ್ವಪದಗಳ ಕುರಿತು ಇನ್ನಷ್ಟು ಸಂಶೋಧನೆ ನಡೆಯಬೇಕಿದೆ ಎಂದರು.
ಅಧ್ಯತೆ ವಹಿಸಿದ್ದ ಆಕಾಶವಾಣಿ ಧಾರವಾಡ ಕೇಂದ್ರದ ವಿಶ್ರಾಂತ ನಿರ್ದೇಶಕ ಸಿ.ಯು. ಬೆಳ್ಳಕ್ಕಿ ಮಾತನಾಡಿ, ಕರಾವಳಿ ಭಾಗದಲ್ಲಿ ಶಿಕ್ಷಿತರು ಯಗಾನ ಕಲಿಯಲು ಆಸಕ್ತಿ ತೋರಿದ್ದರಿಂದ ಯಗಾನ ಅಮೋಘವಾಗಿ ಬೆಳೆಯಿತು. ಆದರೆ ಉತ್ತರ ಕರ್ನಾಟಕದಲ್ಲಿ ಸಿರಿವಂತ ಕಲೆ ಇದ್ದರೂ ಅದನ್ನು ಬೆಳೆಸಲು ನಮಗೆ ಸಾಧ್ಯವಾಗುತ್ತಿಲ್ಲ. ಜಾನಪದ ಸಂಶೋಧನಾ ಕೇಂದ್ರ ಯುವ ಜನರನ್ನು ಜಾನಪದದತ್ತ ಸೆಳೆಯುವ ದಿಸೆಯಲ್ಲಿ ಕಾರ್ಯಕ್ರಮ ರೂಪಿಸಬೇಕು. ಶಾಲೆ ಕಾಲೇಜುಗಳಿಗೆ ಹೋಗಿ ಜಾನಪದ ತಲುಪಿಸಬೇಕು ಎಂದರು.
ಜಾನಪದ ಸಂಶೋಧನಾ ಕೇಂದ್ರದ ಅಧ್ಯಕ್ಷೆ ವಿಶ್ವೇಶ್ವರ ಹಿರೇಮಠ, ಉಪಾಧ್ಯಕ್ಪ ಗುರು ಕಲ್ಮಠ, ಕಾರ್ಯದರ್ಶಿ ನಾಗಭೂಷಣ ಹಿರೇಮಠ, ಇತರರು ಇದ್ದರು.