ಮಡಿಕೇರಿ: ದಕ್ಷಿಣ ಕೊಡಗಿನಲ್ಲಿ ಭಯ ಸೃಷ್ಟಿಸಿರುವ ನರಹಂತಕ ಹುಲಿ ಹತ್ಯೆ ಕಾರ್ಯಾಚರಣೆಗೆ ನಿಯೋಜಿಸಿದ್ದ ಶಾರ್ಪ್ ಶೂಟರ್ ಗಳು ಅರಣ್ಯ ಇಲಾಖೆ ನಡೆಯಿಂದ ಬೇಸತ್ತು ಕಾರ್ಯಾಚರಣೆಯಿಂದ ಹಿಂದೆ ಸರಿದಿದ್ದಾರೆ.
ಹುಲಿಯ ಮಾಹಿತಿ ಪಡೆದುಕೊಂಡು ತಾವೇ ಗುಂಡಿಕ್ಕಿ ಕೊಲ್ಲಬೇಕಾಗಿತ್ತು. ಅರಣ್ಯ ಇಲಾಖೆ ಹುಲಿ ಬಗ್ಗೆ ನಿಖರ ಮಾಹಿತಿ ನೀಡಲು ಸಹಕರಿಸದಿರುವುದು ಶೂಟರ್ ಗಳ ಅಸಮಾಧಾನಕ್ಕೆ ಕಾರಣವಾಗಿದೆ. ನರಹಂತಕ ಹುಲಿ ಎಂದು ಗುರುತಿಸಲಾಗಿರುವ ಯು 285 ಹುಲಿ ಮೇಲೆ ಮಾತ್ರ ಗುಂಡಿಕ್ಕಬೇಕಾಗಿದೆ. ಬೇರೆ ಹುಲಿ ಕೊಂದಲ್ಲಿ ಕಾನೂನು ಕ್ರಮಕ್ಕೆ ಗುರಿ ಆಗಬೇಕಾಗಿದೆ ಎಂಬ ಕಳವಳ ಶೂಟರ್ ಗಳು ಹೊಂದಿದ್ದಾರೆ.
ಸುಶೀಲ್ ಕುಮಾರ್್, ಪೊಂಜಂಡ ತ್ಯಾಗ್ ಉತ್ತಪ್ಪ ಅವರನ್ನು ಹುಲಿ ಗುಂಡಿಕ್ಕಿ ಕೊಲ್ಲಲು ಸರ್ಕಾರ ನಿಯೋಜಿಸಿದೆ. ಸ್ಥಳೀಯರಾದ ತಡಿಯಂಗಡ ಕರುಂಬಯ್ಯ, ಕೋಟ್ರಮಾಡ ಮಂಜು ತಂಡದಲ್ಲಿದ್ದರು. ಅರಣ್ಯ ಇಲಾಖೆ ಹುಲಿ ಸೆರೆ ಕಾರ್ಯಾಚರಣೆ ನಾಟಕ ಮುಂದುವರಿಸಿರುವುದಕ್ಕೆ ಸ್ಥಳೀಯರು ತೀವ್ರ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.
ಬೆಳ್ಳೂರಿನಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ನೇತೃತ್ವದಲ್ಲಿ 6ನೇ ದಿನವಾದ ಶನಿವಾರವೂ ಪ್ರತಿಭಟನೆ ನಡೆಯಿತು. ನೆಮ್ಮಲೆ ಗ್ರಾಮದ ನಿವಾಸಿ ಮಾಣೀರ ಕಂದಾ ಪೂಣಚ್ಚ ಅವರಿಗೆ ಸೇರಿದ ಹಸು ಹುಲಿ ದಾಲಿಗೆ ಬಲಿಯಾಗಿದೆ. ಮೂರು ದಿನ ಹಿಂದೆ ಕಾಣೆಯಾಗಿದ್ದ ಹಸು ಮೃತದೇಹ ಪತ್ತೆಯಾಗಿದೆ. ಬಹುತೇಕ ಭಾಗವನ್ನು ಹುಲಿ ತಿಂದು ಹಾಕಿದೆ.