ಹಾವೇರಿ: ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿದರೆ ನಿತ್ಯವೂ ಶೇ. 2ಕ್ಕಿಂತ ಹೆಚ್ಚು ಲಾಭ ಕೊಡುವುದಾಗಿ ಹೇಳಿ ಉದ್ಯಮಿಯೊಬ್ಬರಿಂದ 5.83 ಲಕ್ಷ ರೂ. ವಂಚಿಸಿದ ಕುರಿತು ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಗರದ ಚಂದ್ರಪ್ಪ ಶಿವಪ್ಪ ತೋಟದ ಮೋಸ ಎಸಗಿದ ಆರೋಪಿ. ಹಾನಗಲ್ಲ ತಾಲೂಕಿನ ಸೀಗೆಹಳ್ಳಿಯ ಮನೋಜ ಭರಮಪ್ಪ ಹಾದಿಮನಿ ಮೋಸ ಹೋದವರು.
ಇವರಿಗೆ ಚಂದ್ರಪ್ಪ ನಾನು ಷೇರು ಮಾರುಕಟ್ಟೆಯಲ್ಲಿ ಟ್ರೇಡರ್ ಆಗಿ ಕೆಲಸ ಮಾಡುತ್ತಿದ್ದು, ನಮ್ಮ ಬಳಿ ಹಣ ಹೂಡಿಕೆ ಮಾಡಿದರೆ ನಿತ್ಯವೂ ಶೇ. 2ಕ್ಕಿಂತ ಹೆಚ್ಚು ಲಾಭಾಂಶ ನೀಡುತ್ತೇನೆ ಎಂದು ನಂಬಿಸಿದ್ದಾನೆ. ನಂತರ ಮನೋಜ ತಮ್ಮ ಖಾತೆಯಿಂದ ಒಟ್ಟು 5.83 ಲಕ್ಷ ರೂ. ಹಾಕಿದ್ದಾರೆ. ಆದರೆ, ಚಂದ್ರಪ್ಪ ಹೂಡಿಕೆ ಮಾಡಿದ ಹಣ ಹಾಗೂ ಲಾಭ ಎರಡನ್ನೂ ಕೊಡದೆ ಮೋಸ ಮಾಡಿದ್ದಾನೆ ಎನ್ನಲಾಗಿದೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.