ಶಿಕಾರಿಪುರ: ಅಂಗವಿಕಲ ಮಕ್ಕಳಿಗೆ ಅನುಕಂಪದ ಜತೆಗೆ ಸಹಾಯ ಮಾಡಬೇಕು ಎಂದು ಶಾಸಕ ಬಿ.ವೈ.ವಿಜಯೇಂದ್ರ ಹೇಳಿದರು.
ಗುರುವಾರ ಬಿಇಒ ಕಚೇರಿ ಆವರಣದಲ್ಲಿರುವ ಶೈಕ್ಷಣಿಕ ಸಂಪನ್ಮೂಲ ಅಧಿಕಾರಿಗಳ ಕಚೇರಿಯಲ್ಲಿ ಅಂಗವಿಕಲ ಮಕ್ಕಳಿಗೆ ಸಾಧನಾ ಸಲಕರಣೆಗಳನ್ನು ನೀಡಿ ಮಾತನಾಡಿ, ಅಂಗವೈಕಲ್ಯ ಶಾಪವಲ್ಲ. ನಾವೆಲ್ಲರೂ ಅಂಗವಿಕಲರಿಗೆ ಪ್ರೀತಿ ಹಂಚಬೇಕು. ಅವರಲ್ಲಿ ಆತ್ಮವಿಶ್ವಾಸ ತುಂಬಬೇಕು. ಇಂದು ಬಹುತೇಕ ಇಲಾಖೆಗಳಲ್ಲಿ ಅಂಗವಿಕಲ ಬಂಧುಗಳು ಕೆಲಸ ನಿರ್ವಹಿಸುತ್ತಿದ್ದಾರೆ. ಸರ್ಕಾರ ಅಂಗವಿಕಲರಿಗಾಗಿ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ ಎಂದರು.
ತಾಲೂಕಿನಾದ್ಯಂತ ಒಂದರಿಂದ ಹತ್ತನೇ ತರಗತಿಯವರೆಗೆ 436 ಅಂಗವಿಕಲ ವಿದ್ಯಾರ್ಥಿಗಳಿದ್ದಾರೆ. ಇದರಲ್ಲಿ 73 ಮಕ್ಕಳು ಗೃಹಾಧಾರಿತ ಶಿಕ್ಷಣಕ್ಕೆ ಒಳಪಟ್ಟಿದ್ದಾರೆ. ತೀರ ನ್ಯೂನ್ಯತೆಯಿರುವ ಮಕ್ಕಳಿಗೆ ವಾರದಲ್ಲಿ ಮೂರು ದಿನ ಫಿಸಿಯೋ ಥೆರಪಿ ಮಾಡಿಸಲಾಗುತ್ತಿದೆ. ಶ್ರವಣ ದೋಷ, ವಾಕ್ ದೋಷ, ದೇಹ ದೋಷಗಳಿರುವ ಮಕ್ಕಳಿಗೆ ತಪಾಸಣೆ, ಚಿಕಿತ್ಸಾ ಶಿಬಿರ ಏರ್ಪಡಿಸಲಾಗಿತ್ತು. ಇದರಲ್ಲಿ 120 ಮಕ್ಕಳು ಭಾಗವಹಿಸಿದ್ದು ಸಂತಸದ ಸಂಗತಿ. ಯಾವ ಕಾರಣಕ್ಕೂ ಅಂಗವಿಕಲರನ್ನು ಉಪೇಕ್ಷೆ ಮಾಡಬೇಡಿ ಎಂದು ಹೇಳಿದರು.
ಬಿಇಒ ಶಶಿಧರ್, ಕ್ಷೇತ್ರ ಸಂಪನ್ಮೂಲ ಅಧಿಕಾರಿ ಕೊಟ್ರೇಶ್ವರಪ್ಪ ಇತರರಿದ್ದರು.