ಜಿಲ್ಲೆ

ಶರವು ದೇವಾಲಯ ಜೀರ್ಣೋದ್ಧಾರ

Dakshina Kannada

ಮಂಗಳೂರು: ನಗರದ ಹೃದಯ ಭಾಗದಲ್ಲಿರುವ ಶರವು ಶ್ರೀ ಶರಭೇಶ್ವರ-ಮಹಾಗಣಪತಿ ದೇವಸ್ಥಾನದ ಜೀರ್ಣೋದ್ಧಾರ ಕಾಮಗಾರಿಗಳು ಆರಂಭಗೊಂಡಿದ್ದು, ಸಮರೋಪಾದಿಯಲ್ಲಿ ಕೆಲಸ ಕಾರ್ಯಗಳು ನಡೆಯುತ್ತಿದೆ.


ಶರವು ಕ್ಷೇತ್ರದ ಆಡಳಿತ ಮೊಕ್ತೇಸರ ಶರವು ರಾಘವೇಂದ್ರ ಶಾಸ್ತ್ರಿ ಮಾರ್ಗದರ್ಶನದಲ್ಲಿ ಜೀರ್ಣೋದ್ಧಾರ ಕಾರ್ಯ ನಡೆಯುತ್ತಿದೆ. ನ. 30ರಂದು ಧಾರ್ಮಿಕ ಕಾರ್ಯಕ್ರಮಗೊಂದಿಗೆ ಜೀರ್ಣೋದ್ಧಾರಕ್ಕೆ ಚಾಲನೆ ನೀಡಲಾಗಿದೆ.


ಗೋಡೆಯಲ್ಲೇ ಉದ್ಭವ: ಶರವು ಶ್ರೀ ಶರಭೇಶ್ವರ ದೇವಸ್ಥಾನ ನಿರ್ಮಾಣವಾಗಿ 900 ವರ್ಷವಾಗಿದೆ. ಈ ದೇವಳದ ಗರ್ಭಗುಡಿಯ ಹೊರ ಗೋಡೆಯಲ್ಲೇ ಮಹಾಗಣಪತಿ ಸುಮಾರು 800 ವರ್ಷಗಳ ಹಿಂದೆ ಉದ್ಭವವಾಗಿದ್ದು, ಆ ಬಳಿಕ ಗಣಪತಿ ದೇವರ ಆರಾಧನೆ ಶ್ರೀ ಕ್ಷೇತ್ರದಲ್ಲಿ ನಡೆದುಕೊಂಡು ಬಂದಿದೆ. ಇದರಿಂದ ಗರ್ಭಗುಡಿ ಮತ್ತು ಗರ್ಭಗುಡಿಯ ಹೊರಗೋಡೆಯನ್ನು ತೆಗೆಯದೆ ಜೀರ್ಣೋದ್ಧಾರ ಕಾರ್ಯವನ್ನು ನಡೆಸಲಾಗುತ್ತಿದೆ ಎನ್ನುತ್ತಾರೆ ಶರವು ಶ್ರೀ ರಾಘವೇಂದ್ರಶಾಸ್ತ್ರಿ. ಗರ್ಭಗುಡಿಯ ಹೊರಭಾಗಕ್ಕೆ ಬೆಳ್ಳಿಯ ಹೊರಹೊದಿಕೆ, ತಾಮ್ರದ ಮೇಲ್ಛಾವಣಿ, ಮರದ ಕೆತ್ತನೆಯೊಂದಿಗೆ ದೇವಾಲಯ ಮತ್ತಷ್ಟು ಆಕರ್ಷಣೀಯವಾಗಲಿದೆ. ಜೀರ್ಣೋದ್ಧಾರ ಹಿನ್ನಲೆಯಲ್ಲಿ ಹಲವು ಸಂಘಟನೆಗಳು, ಭಕ್ತರು ಕ್ಷೇತ್ರಕ್ಕೆ ಬಂದು ಕರಸೇವೆಯಲ್ಲಿ ತೊಡಗಿದ್ದಾರೆ.


ಮೇ ತಿಂಗಳಲ್ಲಿ ಬ್ರಹ್ಮಕಲಶೋತ್ಸವ: ಶರವು ಮಹಾಗಣಪತಿ ದೇವಸ್ಥಾನ ಜೀರ್ಣೋದ್ಧಾರ ಕಾರ್ಯಗಳು ಮುಗಿದು ಮೇ ಮೊದಲ ವಾರದಲ್ಲಿ ಬ್ರಹ್ಮಕಲಶೋತ್ಸವ ನಡೆಸಲು ದೇವಳ ಆಡಳಿತ ಮಂಡಳಿ ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ಕೆತ್ತನೆ ಕೆಲಸಗಳು, ನವೀಕರಣದ ಕಾರ್ಯಗಳು ಭರದಿಂದ ನಡೆಯುತ್ತಿವೆ.


ಪೂಜಾ ಸಮಯ ಬದಲಾವಣೆ: ಜೀರ್ಣೋದ್ಧಾರ ನವೀಕರಣ ಕಾರ್ಯ ನಡೆಯುವ ಕಾರಣ ಬ್ರಹ್ಮಕಲಶೋತ್ಸವದವರೆಗೆ ಬೆಳಗ್ಗಿನ ಪೂಜೆ, ಮಹಾಪೂಜೆ, ಮಹಾಗಣಪತಿ ಹೋಮಗಳು ಬೆಳಗ್ಗೆ 7 ಗಂಟೆಯೊಳಗೆ ನಡೆಯುತ್ತದೆ. ಆ ಬಳಿಕ ಪ್ರಸಾದ ವಿತರಣೆ ಮಾತ್ರ ನಡೆಯಲಿದೆ ಎಂದು ಆಡಳಿತ ಮೊಕ್ತೇಸರ ಶರವು ರಾಘವೇಂದ್ರ ಶಾಸ್ತ್ರಿ ತಿಳಿಸಿದ್ದಾರೆ.