ಹೊನ್ನಾವರ: ಪರಿಸರ, ಸಮಾಜ ಹಾಗೂ ಸಂಸ್ಕೃತಿಗೆ ಹಾನಿಯನ್ನು ಉಂಟು ಮಾಡುವ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಕುರಿತು ಸಾರ್ವಜನಿಕ ಸಭೆಯು ತಾಲೂಕಿನ ಗೇರುಸೊಪ್ಪಾ ಬಂಗಾರಮಕ್ಕಿಯ ಶ್ರೀ ವೀರಾಂಜನೇಯ ಸಭಾಭವನದಲ್ಲಿ ಆ. 24ರಂದು ಬೆಳಗ್ಗೆ 10 ಗಂಟೆಗೆ ನಡೆಯಲಿದೆ ಎಂದು ಶ್ರೀ ಕ್ಷೇತ್ರ ಬಂಗಾರಮಕ್ಕಿಯ ಧರ್ಮಾಧಿಕಾರಿ ಶ್ರೀ ಮಾರೂತಿ ಗುರೂಜಿ ತಿಳಿಸಿದರು.
ತಾಲೂಕಿನ ಬಂಗಾರಮಕ್ಕಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು.
ಈ ಯೋಜನೆಯಿಂದ 142 ಹೆಕ್ಟೇರ್ ಅರಣ್ಯ ಭೂಮಿ, 16 ಸಾವಿರ ಮರಗಳು ನಾಶವಾಗುವುದು. ಇದು ಭೂಗತ ಯೋಜನೆಯಾಗಿದ್ದರೂ ಭೂಮಿ ಅಡಿ 60 ಮೀಟರ್ ಕೆಳಭಾಗದಲ್ಲಿ 300 ಮೀಟರ್ ಅಗಲದಲ್ಲಿ ಅಂದಾಜು 7 ಕಿಮೀ ಉದ್ದದ ಸುರಂಗ ಮಾರ್ಗ ಆಗಲಿರುವ ಬಗ್ಗೆ ಮಾಹಿತಿ ಇದೆ. ಆರಂಭದಲ್ಲಿ 4 ಸಾವಿರ ಕೋಟಿ ರೂ. ಯೋಜನೆ ಎಂದಿದ್ದರು, ಇದೀಗ 10 ಸಾವಿರ ಕೋಟಿ ರೂ. ಬಜೆಟ್ ಘೊಷಣೆಯಾಗಿದೆ. ಇದಿಷ್ಟೇ ದುಡ್ಡಿನ ವೆಚ್ಚದಲ್ಲಿ ಪರ್ಯಾಯ ಇಂಧನ ವ್ಯವಸ್ಥೆಗಳನ್ನು ಮಾಡಿಕೊಳ್ಳಲು ಬೇಕಷ್ಟು ದಾರಿಗಳಿವೆ.
120 ಮಿಲಿಯನ್ ವರ್ಷಗಳ ಮಳೆಕಾಡು ಇದಾಗಿದೆ. ಸಿಂಗಳೀಕ ಸಂರಕ್ಷಿತ ಪ್ರದೇಶ, ಹುಲಿ ಸಂರಕ್ಷಿತ, ಕಾಳಿಂಗ ಸಂರಕ್ಷಿತ ಪ್ರದೇಶ, ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಯೋಜನೆಯನ್ನು ಮಾಡಲು ಹೊರಟಿದ್ದಾರೆ. ಜಿಲ್ಲೆಗೆ ಅವಶ್ಯಕತೆ ಇರುವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ವಿಶ್ವವಿದ್ಯಾಲಯವಾಗಲಿ ನಿರ್ಮಾಣ ಮಾಡುವ ಆಸಕ್ತಿ ತೋರುವುದಿಲ್ಲ, ಇಂತಹ ಜನವಿರೋಧಿ ಯೋಜನೆಗೆ ಸರ್ಕಾರ ಮುಂದಾಗುತ್ತದೆ. ಯೋಜನೆಯ ಬಗ್ಗೆ ತಜ್ಞರ ಜತೆಗೂಡಿ ಚಿಂತನೆ ನಡೆಸಿ, ಅಭಿಪ್ರಾಯ ಸಂಗ್ರಹಿಸಿ, ಅವಶ್ಯಕತೆ ಇದ್ದಲ್ಲಿ ಕಾನೂನಾತ್ಮಕ ಹೋರಾಟಕ್ಕೂ ಮುಂದಾಗುತ್ತೇವೆ ಎಂದರು.
ಸಂಪನ್ಮೂಲ ವ್ಯಕ್ತಿಗಳಾಗಿ ಡಾ. ಟಿ.ವಿ. ರಾಮಚಂದ್ರ, ಪ್ರೋ. ಬಿ.ಎಂ. ಕುಮಾರಸ್ವಾಮಿ, ಎಂ.ಡಿ. ಸುಭಾಷಚಂದ್ರನ್, ಶಿವಾನಂದ ಕಳವೆ, ಡಾ. ಶ್ರೀಪತಿ, ಡಾ. ಶಂಕರ ಶರ್ವ, ಅಖಿಲೇಶ ಚಿಪ್ಲಿ, ಡಾ. ಗಿರೀಶ ಜನ್ನೆ, ಡಾ. ಎನ್.ಎಂ. ಗುರುಪ್ರಸಾದ, ಡಾ. ಸವಿನಯ ಮಾಲ್ವೆ, ಡಾ. ಪ್ರಕಾಶ ಮೇಸ್ತ, ಡಾ. ಸಚೇತ ಹೆಗಡೆ, ಕಾರ್ತೀಕ ಸಲೇಹಿತ್ಲು, ಸಂದೀಪ ಹೆಗಡೆ, ರವಿ ಹೆಗಡೆ, ಮಂಜುನಾಥ ನಾಯ್ಡು, ಚಂದ್ರಕಾಂತ ಕೊಚರೇಕರ್, ಬಾಲಚಂದ್ರ ಹೆಗಡೆ ಸಾಯಿಮನೆ, ಕೇಶವ ಕೂರ್ಸೆ, ಇತರರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಶ್ರೀ ಕ್ಷೇತ್ರ ಬಂಗಾರಮಕ್ಕಿಯ ವ್ಯವಸ್ಥಾಪಕ ಅಜಿತಕುಮಾರ ಹೆಗಡೆ, ಗಣೇಶ ಹೆಗಡೆ ಇದ್ದರು.