ಜಿಲ್ಲೆ

ಮೂಡಿಗೆರೆಯಲ್ಲಿ ಶರವನ್ನರಾತ್ರಿ ಸಂಭ್ರಮ

ಜಿ.ಹೆಚ್. ಧನ್ಯಕುಮಾರ್

ಮೂಡಿಗೆರೆ: ಪಟ್ಟಣದ ಅಡ್ಯಂತಾಯ ರಂಗಮಂದಿರದಲ್ಲಿ 21ವರ್ಷದ ಹಿಂದೆ ಸಮಾನ ಮನಸ್ಕರು ಕೂಡಿಕೊಂಡು ಮಾಜಿ ಸಚಿವೆ ಮೋಟಮ್ಮ ನೇತೃತ್ವದಲ್ಲಿ ದುರ್ಗಾಮಾತೆ ವಿಗ್ರಹ ಪ್ರತಿಷ್ಠಾಪಿಸಿ ವಿಶೇಷವಾಗಿ ಶರವನ್ನರಾತ್ರಿಯನ್ನು ಆಚರಿಸಿಕೊಂಡು ಬರಲಾಗುತ್ತಿದೆ.
ಒಂಬತ್ತು ದಿನ ನಡೆಯುವ ಉತ್ಸವದಲ್ಲಿ ಭಕ್ತಿ ಪ್ರಧಾನ ಚಟುವಟಿಕೆಗಳಿಗೆ ಆದ್ಯತೆ ನೀಡುವುದು ವಿಶೇಷವಾಗಿದೆ. ಸ್ಥಳೀಯ ಕಲಾವಿದರ ಪ್ರತಿಭೆ ಅನಾವರಣಕ್ಕೆ ಅವಕಾಶ ಕಲ್ಪಿಸಲಾಗುವುದು. ಕೊನೆದಿನ ಲಯನ್ಸ್ ವೃತ್ತದಲ್ಲಿ ದುಷ್ಟಶಕ್ತಿ ಸಂಹಾರ ಎಂಬ ಹೆಸರಿನಲ್ಲಿ ರಾತ್ರಿ ನಡೆಯುವ ದುಷ್ಟ ಶಕ್ತಿಯ ದಹನವನ್ನು ನೋಡಲು ಗ್ರಾಮೀಣ ಭಾಗದಿಂದಲೂ ಜನ ತಂಡೋಪ ತಂಡವಾಗಿ ಭೇಟಿ ನೀಡುತ್ತಾರೆ.
ಧಾರ್ಮಿಕ ಚಟುವಟಿಕೆ ಅಂಗವಾಗಿ ಪ್ರತಿದಿನ ದೀಪ ನಮಸ್ಕಾರ, ದುರ್ಗಾ ಹೋಮ, ಅನ್ನಸಂತರ್ಪಣೆ ನಡೆಸಲಾಗುತ್ತದೆ. ಪೂಜೆಯಲ್ಲಿ ತಾಲೂಕಿನ ವಿವಿಧ ಸಂಘ-ಸಂಸ್ಥೆ ಭಾಗವಹಿಸುತ್ತವೆ. ಪ್ರತಿ ವರ್ಷವೂ ವಿಗ್ರಹ ಹಾಗೂ ಅನ್ನಸಂತರ್ಪಣೆಯನ್ನು ದಾನಿ ಕೆ.ಮಂಚೇಗೌಡ ಕುಟುಂಬ ನಡೆಸುತ್ತಿದೆ.
ದುರ್ಗಾಮಾತೆ ಪ್ರತಿಷ್ಠಾಪನ ಸಮಿತಿ ಅಧ್ಯಕ್ಷರಾಗಿ ಮಾಜಿ ಸಚಿವೆ ಮೋಟಮ್ಮ ಗೌರವಾಧ್ಯಕ್ಷರಾಗಿ ಶಾಸಕಿ ನಯನಾ ಮೋಟಮ್ಮ, ಕಾರ್ಯಾಧ್ಯಕ್ಷರಾಗಿ ಉದ್ಯಮಿ ಕೆ.ಮಂಚೇಗೌಡ ಉಸ್ತುವಾರಿಯಲ್ಲಿ ಕಾರ್ಯಕ್ರಮ ನಡೆಯುತ್ತಿದೆ.
ನವರಾತ್ರಿ ಪ್ರಯುಕ್ತ ಶ್ರೀದುರ್ಗಾ ಸೇವಾ ಸಮಿತಿ ಹಾಗೂ ಮೂಡಿಗೆರೆ ಸ್ಪೋರ್ಟ್ಸ ಕ್ಲಬ್ನಿಂದ ನಡೆಸಲಾದ ಮೊದಲ ವರ್ಷದ ಕಬ್ಬಡಿ ಟೂರ್ನಿಯಲ್ಲಿ ಮಹಿಳಾ ವಿಭಾಗ ಹಾಗೂ ಪುರುಷ ವಿಭಾಗದಲ್ಲಿ ಅಂಡರ್ 16 ಒಪನ್ ಪಂದ್ಯಾವಳಿಗಳು ನಡೆದವು. ಪುರುಷರಿಗೆ ಪ್ರತ್ಯೇಕವಾಗಿ ತಾಲೂಕು ಮಟ್ಟದ ಸ್ಪರ್ಧೆ ನಡೆಸಲಾಯಿತು. ಬೇಲೂರು, ಧರ್ಮಸ್ಥಳ, ಉಜಿರೆ, ಚಿಕ್ಕಮಗಳೂರು ಸೇರಿದಂತೆ ವಿವಿಧ ಪ್ರದೇಶಗಳ ಕ್ರೀಡಾಪಟುಗಳು ಭಾಗವಹಿಸಿದ್ದರು.
ದುರ್ಗಾ ಸೇವಾ ಸಮಿತಿಯ ಕುಮಾರ್, ಡಿ.ಕೆ.ಲಕ್ಷ್ಮಣಗೌಡ, ಕೆ.ವೆಂಕಟೇಶ್, ದಶರಥ, ಸಂಪತ್ ಮುಗ್ರಹಳ್ಳಿ, ಸುರೇಶ, ರಘು, ಅಕ್ಷಯ್, ಪ್ರದೀಪ, ಜಗದೀಶ್, ಚಂದನ್ ಇತರರಿದ್ದರು.