ಇಂಡಿ: ಶರಣರ ನಡೆ ನುಡಿಗಳು ನಿಸ್ವಾರ್ಥ ಸಮಾಜ ಕಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಿವೆ. ಶರಣರು ಲಿಂಗ, ಜಾತಿ, ವರ್ಗ, ಜನಾಂಗ ಭೇದಭಾವವಿಲ್ಲದೆ ಬಾಳಿದರು ಎಂದು ಸಮ್ಮೇಳನದ ಸರ್ವಾಧ್ಯಕ್ಷ ಎಂ.ಜೆ.ಪಾಟೀಲ ಹೇಳಿದರು.
ಪಟ್ಟಣದ ಬಸವರಾಜೇಂದ್ರ ಮಂಗಲ ಕಾರ್ಯಾಲಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ತಾಲೂಕು ಪ್ರಥಮ ಶರಣ ಸಾಹಿತ್ಯ ಸಮ್ಮೇಳನ, ಶರಣ ಸಾಹಿತ್ಯ ಪರಿಷತ್ತಿನ ಬೆಳ್ಳಿಹಬ್ಬ ಸಂಭ್ರಮ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶರಣರು ದಾಸೋಹದ ಮೂಲಕ ಶರಣ ಸಾಹಿತ್ಯಕ್ಕೆ ಪ್ರೋತ್ಸಾಹ ನೀಡಿದ್ದಾರೆ. ಸಮಸಮಾಜ ನಿರ್ಮಾಣ ಮಾಡುವಲ್ಲಿ ಅಪಾರ ಕೊಡುಗೆ ನೀಡಿದ್ದಾರೆ. ಶರಣ ಶರಣೆಯರ ತತ್ವ ಸಿದ್ಧಾಂತಗಳು, ವಿಚಾರಧಾರೆಗಳು ಪ್ರತಿಯೊಬ್ಬರ ಮನೆ ಮನ ತಲುಪುವ ಕಾರ್ಯವಾಗಬೇಕಾಗಿದೆ ಎಂದರು.
ವಿಜಯಪುರ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಜಂಬುನಾಥ ಕಲ್ಯಾಣಿ, ವಿಜಯಪುರ ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ ವಿ.ಸಿ.ನಾಗಠಾಣ, ಶಿಕ್ಷಕ ಬಸವರಾಜ ಗೋರನಾಳ, ವೈ.ಜಿ.ಬಿರಾದಾರ, ಇಂಡಿ ಕಸಾಪ ಘಟಕದ ಅಧ್ಯಕ್ಷ ರಾಘವೇಂದ್ರ ಕುಲಕರ್ಣಿ ಮಾತನಾಡಿದರು. ಇಂಡಿ ಓಂಕಾರಾಶ್ರಮದ ಡಾ.ಸ್ವರೂಪಾನಂದ ಶ್ರೀಗಳು, ಕಂದಾಯ ಎಸಿ ಅಬೀದ ಗದ್ಯಾಳ ಇದ್ದರು.
ಪುರಸಭೆ ಅಧ್ಯಕ್ಷ ಲಿಂಬಾಜಿ ರಾಠೋಡ ರಾಷ್ಟ್ರ ಧ್ವಜಾರೋಹಣ, ಶಸಾಪ ಅಧ್ಯಕ್ಷ ಬಿ.ಎಸ್.ಪಾಟೀಲ ಪರಿಷತ್ ಧ್ವಜಾರೋಹಣ ನೆರವೇರಿಸಿದರು. ಸಮ್ಮೇಳನದ ಅಧ್ಯಕ್ಷ ಎಂ.ಜೆ.ಪಾಟೀಲ ಅವರ ಮೆರವಣಿಗೆ ಪ್ರವಾಸಿ ಮಂದಿರದಿಂದ ಆರಂಭಗೊಂಡು ನಗರದ ಪ್ರಮುಖ ವೃತ್ತಗಳ ಮೂಲಕ ಬಸವರಾಜೇಂದ್ರ ಮಂಗಲ ಕಾರ್ಯಾಲಯ ತಲುಪಿತು.
ಜಾತಿ, ಮತ, ಪಂಥ, ಭೇದ ಮರೆತು ರಚನೆಯಾದ ಶರಣ ಸಾಹಿತ್ಯ ಪರಿಷತ್‌ನಿಂದ ಹಲವು ಧಾರ್ಮಿಕ, ಸಾಂಸ್ಕೃತಿಕ ಕಾರ್ಯಗಳನ್ನು ಮಾಡುತ್ತಿರುವುದು ಸಂತಸ ತಂದಿದೆ. ಅನುಭವ ಮಂಟಪದಲ್ಲಿ ನಡೆಯುತ್ತಿದ್ದ ಚರ್ಚೆ ಸಂವಾದಗಳು ಇಂದಿಗೂ ಪ್ರಸ್ತುತವಾಗಿವೆ. ಇಂಡಿಯ ಶರಣ ಸಾಹಿತ್ಯ ಪರಿಷತ್ ಮಾಡುತ್ತಿರುವ ಕಾರ್ಯ ಪ್ರಶಂಸನೀಯ. ಯಶವಂತರಾಯಗೌಡ ಪಾಟೀಲ, ಶಾಸಕರು